×
Ad

ಬೈಕಂಪಾಡಿಯಲ್ಲಿ ಅಂಗಡಿಗಳ ಧ್ವಂಸ: ಪ್ರಕರಣ ದಾಖಲಿಸಲು ಸೂಚನೆ- ಶಾಸಕ ಮೊಯ್ದಿನ್ ಬಾವಾ

Update: 2017-12-24 23:06 IST

ಮಂಗಳೂರು, ಡಿ. 24: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ಅಂಗಡಿಗಳನ್ನು ಜೆಸಿಬಿಯನ್ನು ಬಳಸಿ ಧ್ವಂಸ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ ಎಂದು ಶಾಸಕ ಮೊಯ್ದಿನ್ ಬಾವಾ ಹೇಳಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿರುವ ಅವರು, ಘಟನೆ ನಡೆದ ಸ್ಥಳಕ್ಕೆ ನಾನು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದೇನೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಆದರೆ, ಅವರು ನಾವು ಧ್ವಂಸ ಮಾಡಿಲ್ಲ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರನ್ನೂ ಸಂಪರ್ಕಿಸಿದ್ದೇನೆ. ಅವರು ಕೂಡ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಇಂತಹ ಅಕ್ರಮ ಕಾರ್ಯಾಚರಣೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ರಾತ್ರಿ ಜೆಸಿಬಿ ಮೂಲಕ ಅಂಗಡಿ ಕಟ್ಟಡಗಳನ್ನು ಧ್ವಂಸ ಮಾಡಿರುವಾಗ ಅಂಗಡಿಗಳ ಒಳಗೆ ಐದಾರು ಕಾರ್ಮಿಕರು ಇದ್ದರು. ಇವರು ಜೆಸಿಬಿ ಕಾರ್ಯಾಚರಣೆಯ ಶಬ್ದ ಕೇಳಿ ಹೊರ ಬಂದಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಕೈಗೊಂಡಿರುವ ಈ ಕಾರ್ಯಾಚರಣೆಯಲ್ಲಿ ಕಾರ್ಮಿಕರ ಜೀವಕ್ಕೆ ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಮೊಯ್ದಿನ್ ಬಾವಾ ಪ್ರಶ್ನಿಸಿದರು.

ಕಟ್ಟಡ ಧ್ವಂಸ ಕಾರ್ಯಾಚರಣೆಯ ಸಂದರ್ಭ ಹೋಟೇಲ್ ಗಳ ಒಳಗೆ ಗ್ಯಾಸ್ ತುಂಬಿದ ಸಿಲಿಂಡರ್‌ಗಳಿದ್ದವು. ಕಾರ್ಯಾಚರಣೆಯ ಸ್ವಲ್ಪ ಹೊತ್ತಿನಲ್ಲೇ ಕೆಲವರು ನಗದು ಸಹಿತ ಇತರ ಸೊತ್ತುಗಳನ್ನು ದೋಚಿದ್ದಾರೆ ಎಂದು ಅಂಗಡಿಯ ಮಾಲಕರು ತನ್ನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಯಾರು ಹೊಣೆ ಹೊತ್ತುಕೊಳ್ಳುತ್ತಾರೆ ಎಂದಿರುವ ಅವರು, ಈಗಾಗಲೇ ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಸ್ ದಾಖಲು ಮಾಡಲು ಹೇಳಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.

ಹೆದ್ದಾರಿ ಅವ್ಯವಸ್ಥೆ ಸರಿ ಮಾಡಲಿ

ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಮೊದಲು ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಲಿ. ಹೆದ್ದಾರಿಯುದ್ದಕ್ಕೂ ಸರ್ವಿಸ್‌ಗಳು ಸರಿಯಾಗಿಲ್ಲ. ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಎಂಬುದು ನಿತ್ಯದ ಸಮಸ್ಯೆಯಾಗಿದೆ. ಇದರಿಂದ ಪ್ರಯಾಣಿಕರು ಕಂಗೆಟ್ಟಿದ್ದಾರೆ. ಟೋಲ್‌ಗೇಟ್ ವರ್ಗಾಯಿಸುವಂತೆಯೂ ಹೇಳಿದ್ದೆ. ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ಮೊದಲು ಯಾವುದಕ್ಕೆ ಪ್ರಾಶಸ್ತ್ಯ ನೀಡಬೇಕೋ ಅದಕ್ಕೆ ನೀಡಲಿ ಎಂದು ಮೊಯ್ದಿನ್ ಬಾವಾ ಆಕ್ರೋಶ ವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಎ.ಕೆ.ಅಶ್ರಫ್‌

ಬೈಕಂಪಾಡಿಯ ಅಂಗಡಿ ಮಾಲಕರಿಗೆ ಯಾವುದೇ ಮುನ್ಸೂಚನೆ ನೀಡದೆ ಅಂಗಡಿಗನ್ನು ಧ್ವಂಸ ಮಾಡಿರುವವರ ಮೇಲೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡು ಸಂತ್ರಸ್ತರಾದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಪಿಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಎ.ಕೆ.ಅಶ್ರಫ್ ಜೋಕಟ್ಟೆ ಆಗ್ರಹಿಸಿದ್ದಾರೆ.

 ಅಂಗಡಿಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಿದ್ದಾರೆಂಬ ಮಾಹಿತಿ ಬಂದ ಕೂಡಲೇ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಈ ಸಂದರ್ಭದಲ್ಲಿ ಸಂತ್ರಸ್ತರು ತಮಗೆ ಯಾವುದೇ ಮಾಹಿತಿ ನೀಡದೆ ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆಂದು ಹೇಳಿದ್ದಾರೆ. ಅಂಗಡಿಯ ಮಾಲಕರಿಗೆ ಮುನ್ಸೂಚನೆಯನ್ನು ನೀಡದೆ ಧ್ವಂಸ ಕಾರ್ಯಾಚರಣೆ ನಡೆಸಿರುವುದು ಕಾನೂನು ಬಾಹಿರ.

 ಈ ಬಗ್ಗೆ ಸಂತ್ರಸ್ತರು ಪಣಂಬೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಇಂತಹ ಅಕ್ರಮ ಕಾರ್ಯಾಚರಣೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಶ್ರಫ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News