ಜೇಸಿ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ
ಮಂಗಳೂರು, ಡಿ.25: ಜ್ಯೂನಿಯರ್ ಛೇಂಬರ್ ಇಂಟರ್‌ನ್ಯಾಷನಲ್ (ಜೇಸಿ) ಮಂಗಳಗಂಗೋತ್ರಿ ಕೊಣಾಜೆ ವತಿಯಿಂದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಜೇಸಿ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ಕವಿ ನಾಡೋಜ ಕೆ.ಎಸ್.ನಿಸಾರ್ ಅಹಮದ್ ಅವರಿಗೆ ‘ಜೇಸಿ ಸಾಧನಾ ಶ್ರೀ ಪ್ರಶಸ್ತಿ’ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಾಗಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಗೆ ‘ಜೇಸಿ ಕಮಲಪತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಿಕ ಮಾತನಾಡಿದ ನಿಸಾರ್ ಅಹಮದ್ ಅವರು, ಯಾವುದೇ ಪ್ರಶಸ್ತಿಯನ್ನು ಪಡೆದಾಗ ಜವಾಬ್ದಾರಿ ಮತ್ತಷ್ಟು ಹೆಚ್ಚಿದಂತೆ. ಉತ್ತಮ ಧ್ಯೇಯ ಆದರ್ಶವಿದ್ದರೆ ಗುರಿ ಸಾಧನೆ ಸುಲಭ ಸಾಧ್ಯವಾಗಲಿದೆ ಎಂದರು.
ಈ ಸಂದರ್ಭ ಜೀ ಕನ್ನಡ ವಾಹಿನಿಯ ಡ್ರಾಮ ಜ್ಯೂನಿಯರ್ಸ್ ಸೀಸನ್- 2 ವಿಜೇತೆ ವಂಶಿ ರತ್ನಕುಮಾರ್ ಅವರಿಗೆ ‘ಜೇಸಿ ಬಾಲ ಪ್ರತಭೆ ಪುರಸ್ಕಾರ-2017’ ನೀಡಿ ಗೌರವಿಸಲಾಯಿತು
ಸಾಹಿತಿ ಡಾ.ನಾ.ದಾಮೋದರ್ ಶೆಟ್ಟಿ ಮತ್ತು ರವೀಂದ್ರ ರೈ ಅಭಿನಂದನಾ ಭಾಷಣ ಮಾಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ ಪಿ., ಜೇಸಿ ವಲಯ 15ರ ಅಧ್ಯಕ್ಷ ಸಂತೋಷ್ ಜಿ.ಉಪಸ್ಥಿತರಿದ್ದರು.
ರವಿಶಂಕರ್ ಹಾಗೂ ಮೋಹನ್ ಶಿರ್ಲಾಲು ಪ್ರಶಸ್ತಿ ಪತ್ರ ವಾಚಿಸಿದರು. ಜೇಸಿ ಮಂಗಳಗಂಗೋತ್ರಿ ಅಧ್ಯಕ್ಷ ಬಾದ್ ಷಾ ಸಂಬಾರತೋಟ ಸ್ವಾಗತಿಸಿದರು.