×
Ad

ಕೊಣಾಜೆ: ಯಕ್ಷಕಲಾವಿದ ದೇವಪ್ಪಗೌಡರಿಗೆ ನೂತನ ಮನೆಯ ಹಸ್ತಾಂತರ

Update: 2017-12-25 17:26 IST

ಕೊಣಾಜೆ,ಡಿ.25: ನಮ್ಮ ಬದುಕು ಎಂಬುದು ಮತ್ತೊಬ್ಬರಿಗೆ ನೆರಳು ಆಶ್ರಯ ನೆರಳು ಕೊಡುವ ಮರದಂತೆ ಆಗಬೇಕು. ಆಗ ನೆಮ್ಮದಿಯೊಂದಿಗೆ ಪುಣ್ಯವೂ ಸಿಗುತ್ತದೆ. ಅಲ್ಲದೆ ಓರ್ವ ಕಲಾವಿದನ ಕಷ್ಟ ನಷ್ಟಗಳನ್ನು ಮತ್ತೊಂದು ಕಲಾವಿದನಿಗೆ ಅರಿಯುವ ಶಕ್ತಿ ಇದೆ. ಹಾಗೆಯೇ ಪಟ್ಲ ಸತೀಶ್ ಶೆಟ್ಟಿ ಅವರು ಈ ಬಡ ಕಲಾವಿದನ ಸಂಕಷ್ಟವನ್ನು ಅರಿತು ಪಟ್ಲ ಫೌಂಡೇಶನ್ ಹಾಗೂ ಶ್ರೀ ರಾಮಾಂಜನೆಯ ವ್ಯಾಯಾಮಶಾಲೆಯ ಸಹಕಾರದೊಂದಿಗೆ ದೇವಪ್ಪ ಗೌಡರಿಗೆ ನೂತನ ಮನೆಯನ್ನು ಕಟ್ಟಿಕೊಟ್ಟು ಮಾದರಿ ಸಮಾಜ ಸೇವೆಯಲ್ಲಿ ತೊಡಗಿಸಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. 

ಅವರು ಸೋಮವಾರ  ಯಕ್ಷಧ್ರುವ ಪಟ್ಲ ಫೌಂಡೇಶನ್, ಪಟ್ಲ ಯಕ್ಷ ಆಶ್ರಯ ಯೋಜನೆ ಮಂಗಳೂರು ಇದರ ವತಿಯಿಂದ ಯಕ್ಷಗಾನ ನೇಪಥ್ಯ ಕಲಾವಿದ ಕೊಣಾಜೆಯ ದೇವಪ್ಪಗೌಡ ಅವರಿಗೆ ಸುಮಾರು ಐದು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯ ಹಸ್ತಾಂತರ ಹಾಗೂ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.  

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಲ ಹರೀಶ್ ಶೆಟ್ಟಿ ಅವರು, ಬಡವರಿಗೆ ಸಹಾಯ ಹಾಗೂ ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಪುಣ್ಯದ ಕಾರ್ಯವಾಗಿದೆ. ಸಾವಿರಾರು ಇತರ ಕಾರ್ಯಕ್ರಮಕ್ಕಿಂತ ಬಡವರಿಗೆ ಸಹಾಯ ಮಾಡುವ ಇಂತಹ ಹತ್ತು ಕಾರ್ಯಕ್ರಮಗಳೇ ಶ್ರೇಷ್ಠ. ಪಟ್ಲ ಫೌಂಡೇಶನ್‍ನನ್ನು ಮುಂಬಯಿಯಲ್ಲೂ ಸಂಘಟಿಸಲಾಗಿದ್ದು ಉತ್ತಮ ಸ್ಪಂದನೆ ದೊರಕಿದೆ. ಈ ಸಂಘಟನೆಯ ವತಿಯಿಂದ ಇನ್ನಷ್ಟು ಮಾದರಿ ಕಾರ್ಯಗಳು ಆಗಲಿ ಎಂದು ಶುಭಹಾರೈಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು, ಆವತ್ತು ದೇವಪ್ಪ ಗೌಡರ ಮನೆಯು ಕುಸಿದು ಬಿದ್ದ ಸಂದರ್ಭದಲ್ಲಿ ಇಲ್ಲಿ ಬಂದಾಗ ಅತಂತ್ರರಾಗಿ ಕಣ್ಣಿರು ಹಾಕಿದ್ದರಯ. ಆದರೆ ದೇವರ ದಯೆಯಿಂದ ಪಟ್ಲ ಫಂಡೇಶನ್ ಸತೀಶ್ ಪಟ್ಲ ಅವರ ಸಹಕಾರದೊಂದಿಗೆ ನೂತನ ಮನೆ ನಿರ್ಮಾಣಗೊಂಡಿದ್ದು ಇದೀಗ ಅವರ ಸಂತಸದ ಕಣ್ಣೀರು ಹರಿದಿದೆ. ಪಟ್ಲ ಸತೀಶ್ ಶೆಟ್ಟಿ ಅವರು ದಾನಿಗಳ ಸಹಕಾರದೊಂದಿಗೆ ಇಂತಹ ಮಾದರಿ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ಕಾರ್ಯವಾಗಿದೆ. ದೇಶ ವಿದೇಶಗಳಲ್ಲಿ ಈಗಾಗಲೇ ಜನಮನ್ನಣೆಯನ್ನು ಗಳಿಸಿರುವ ಸತೀಶ್ ಪಟ್ಲ ಅವರಿಗೆ ದೇವರು ದೀರ್ಘ ಆಯುಷ್ಯ ಆರೋಗ್ಯವನ್ನು ಕೊಟ್ಟು ಇನ್ನಷ್ಟು ಕೀರ್ತಿವಂತರನ್ನಾಗಿ ಮಾಡಲಿ ಎಂದು ಹೇಳಿದರು. 

ಸಮಾರಂಭದಲ್ಲಿ ರಾಮಕೃಷ್ಣ ಪ್ರೌಢಶಾಲೆಯ ರವೀಂದ್ರ ರೈ ಹರೇಕಳ, ಸಮಾಜಸೇವಕ ಪ್ರಸಾದ್ ರೈ ಕಲ್ಲಿಮಾರ್, ಶ್ರೀ ರಾಮಾಂಜನೆಯ ವ್ಯಾಯಾಮ ಶಾಲೆಯ ನಾಗೇಶ್ ಗುಡ್ಡುಪಾಲ್, ಕುಡುಬಿ ಸಮಾಜದ ಮುಖಂಡ ನರ್ಸುಗೌಡ, ಪುರುಷೋತ್ತಮ ಭಂಡಾರಿ ಕಡಂದೆಲೆ, ಪಂಚಾಯಿತಿ ಸದಸ್ಯರಾದ ರಾಮಚಂದ್ರ ಎಂ, ಬಿಜೆಪಿ ಮುಖಂಡ ಚಂದ್ರಹಾಸ್ ಉಚ್ಚಿಲ್, ಪಟ್ಲ ಫೌಂಡೇಶನ್ ಸದಸ್ಯ ಪ್ರದೀಪ್ ಆಳ್ವ ಅಜೇಕಳಗುತ್ತು, ಮಂಜುನಾಥ ಗೌಡ ಅಣ್ಣೆರೆಪಾಲ್, ಎಪಿಎಂಸಿ ಸದಸ್ಯೆ ಮುತ್ತು ಶೆಟ್ಟಿ, ನಮಿತಾ ಶ್ಯಾಂ ಮೊದಲಾದವರು ಉಪಸ್ಥಿತರಿದ್ದರು.

ಕದ್ರಿ ನವನೀತ್ ಶೆಟ್ಟಿ ಅವರು ಪಟ್ಲ ಫೌಂಡೇಶನ್‍ನ ಯೋಜನೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ರಾಮಾಂಜನೆಯ ವ್ಯಾಯಾಮಶಾಲೆಯ ಗೋಪಾಲ್ ಅಣ್ಣೆರೆಪಾಲ್ ಸ್ವಾಗತಿಸಿ, ನವೀನ್ ಕೊಪ್ಪಲ ಕಾರ್ಯಕ್ರಮ ನಿರೂಪಿಸಿದರು. 

ದೇವಪ್ಪ ಗೌಡರ ಮನೆ ಕುಸಿದು ಬಿದ್ದಿತ್ತು
ಕಳೆದ ಮಳೆಗಾಲದಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಕೊಣಾಜೆ ಗುಡ್ಡುಪಾಲ್‍ನಲ್ಲಿ ವಾಸವಾಗಿರುವ ಯಕ್ಷಗಾನ ಕಲಾವಿದ ದೇವಪ್ಪ ಗೌಡರ ಸೂರು ಸಂಪೂರ್ಣ ಕುಸಿದು ಬಿದ್ದಿತ್ತು. ಮೊದಲೇ ಬಡವನಾಗಿದ್ದ ದೇವಪ್ಪ ಗೌಡರು ಅವರ ತಂಗಿಯೊಂದಿಗೆ ವಾಸವಾಗಿದ್ದರು. ಕಟೀಲು ಮೇಳದಲ್ಲಿ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಮನೆ ಕುಸಿತದಿಂದಾಗಿ ಅವರ ಬದುಕು ಅತಂತ್ರವಾಗಿದ್ದಾಗ ಯಕ್ಷ ಧ್ರುವ ಪಟ್ಲ ಫೌಂಡೇಶನ್‍ನ ಸತೀಶ್ ಪಟ್ಲ ಅವರು ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News