×
Ad

ಮಾನವಿಯತೆಡೆಗೆ ಸಾಗುವುದೇ ಕ್ರಿಸ್ಮಸ್ ಹಬ್ಬದ ಸಾರ : ವಂ|ರೊನಾಲ್ಡ್

Update: 2017-12-25 17:46 IST

ಪುತ್ತೂರು,ಡಿ.25: ಯೇಸುಕ್ರಿಸ್ತರ ಜೀವನವೇ ನಮಗೆಲ್ಲರಿಗೂ ಆದರ್ಶವಾಗಿದೆ ಎಂಬುದು ಈ ಹಬ್ಬವು ನಮಗೆ ಸಂದೇಶವನ್ನು ನೀಡುತ್ತದೆ. ಅಂಧಕಾರದಿಂದ ಬೆಳಕಿನೆಡೆಗೆ ನಮ್ಮ ಜೀವನ ಸಾಗಬೇಕು ಜೊತೆಗೆ ಮಾನವೀಯತೆಯ ಮುನುಷ್ಯತ್ವದೆಡೆಗೆ ಕ್ರೈಸ್ತ ಬಾಂಧವರು ತಮ್ಮ ಜೀವನವನ್ನು ಸಾಗಿಸುವುದೇ ಕ್ರಿಸ್ಮಸ್ ಹಬ್ಬದ ಸಾರವಾಗಿದೆ ಎಂದು ನೂರಾರು ಭಕ್ತಿಗೀತೆಗಳ ರಚನಾಕಾರ ಹಾಗೂ ಮಂಗಳೂರಿನ ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ವಂ|ರೊನಾಲ್ಡ್ ಸೆರಾವೋರವರು ಹೇಳಿದರು.

ಪುತ್ತೂರು ಮಾಯ್ದೆ ದೇವುಸ್ ಚರ್ಚ್‍ನಲ್ಲಿ ಸೋಮವಾರ ರೆ. ಫಾ. ರೊನಾಲ್ಡ್ ಸೆರಾವೋರವರು ಹಬ್ಬದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಕ್ರಿಸ್ಮಸ್ ಹಬ್ಬ ಯೇಸು ಸ್ವಾಮಿಯ ಹುಟ್ಟುಹಬ್ಬ. ದೇವರು ಮಾನವನ ಪ್ರೀತಿಯನ್ನು ಮಾಡಿದರು. ಮಾನವನ ಪಾಪ ವಿಮೋಚನೆಗಾಗಿ ದೇವರು ದೇವ ಕುಮಾರ ಯೇಸು ಸ್ವಾಮಿಯು ಮನುಷ್ಯರಾಗಿ ಹುಟ್ಟಿ ಭೂಲೋಕಕ್ಕೆ ಬಂದ ಘಟನೆಯನ್ನು ಸ್ಮರಿಸಿ ಸಂಭ್ರಮಿಸುವ ಹಬ್ಬವಾಗಿದೆ. ಅಂಧಕಾರದಿಂದ ಬೆಳಕಿನೆಡೆಗೆ ಯಾರು ತಮ್ಮ ಜೀವನವನ್ನು ಮುಡುಪಾಗಿಡುತ್ತಾರೋ ಅವರು ದೇವರ ರಾಜ್ಯದಲ್ಲಿ ಸ್ಥಾನವನ್ನು ಸಂಪಾದಿಸುತ್ತಾರೆ.

ದೇವರಿಂದ ಮನುಷ್ಯತ್ವ, ಮನುಷ್ಯತ್ವದ ಮೂಲಕ ದೇವರನ್ನು ಕಾಣುವ ಅಪೂರ್ವ ಅವಕಾಶವನ್ನು ಮಾನವ ಸಂಪಾದಿಸಬೇಕಾಗಿದೆ ಎಂದ ಅವರು ಮನುಷ್ಯ ತನ್ನ ಜೀವಿತಾವಧಿಯಲ್ಲಿ ಇತರರ ಕಷ್ಟ-ನೋವಿಗೆ ಸ್ಪಂದಿಸುವ ಮತ್ತು ಭಾಗಿಯಾಗುವ ಮೂಲಕ ದೇವರಿಗೆ ನಿಜವಾದ ಮಹಿಮೆಯನ್ನು ಸಲ್ಲಿಸಿದಂತಾಗುತ್ತದೆ. ಯೇಸು ಕ್ರಿಸ್ತರು ಭೂಲೋಕಕ್ಕೆ ಆಗಮಿಸಿದಾಗ ದೇವರು ಮನುಷ್ಯರನ್ನು ಪ್ರೀತಿಸುತ್ತಾರೆ ಮತ್ತು ಆ ಪ್ರೀತಿಗಾಗಿ ದೇವರು ಮನುಷ್ಯನ ಪಾಪಗಳನ್ನು ಕ್ಷಮಿಸುತ್ತಾರೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಹಬ್ಬವಾಗಿ ಕ್ರಿಸ್ಮಸ್ ಗೋಚರಿಸಲ್ಪಡುತ್ತದೆ ಎಂದು ಅವರು ಹೇಳಿದರು.

ಚರ್ಚ್‍ನ ಪ್ರಧಾನ ಧರ್ಮಗುರು ವಂ| ಆಲ್ಫ್ರೆಡ್ ಜಾನ್ ಪಿಂಟೋರವರು ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿದ್ದರು. ಕಾರ್ಮೆಲಿತ್ ಮೇಳದ ಧರ್ಮಗುರು ಪುತ್ತೂರಿನ ಪರ್ಲಡ್ಕ ನಿವಾಸಿಯಾಗಿರುವ ಪ್ರಸ್ತುತ ಕೆನಡದ ಕ್ಯಾಲ್ಗರಿ ಚರ್ಚ್‍ನಲ್ಲಿ ಧರ್ಮಗುರುಗಳಾಗಿರುವ ವಂ|ಮೆಲ್ವಿನ್ ಪಿಂಟೋ, ಚರ್ಚ್‍ನ ಸಹಾಯಕ ಧರ್ಮಗುರು ವಂ|ಪ್ರವೀಣ್ ಡಿ'ಸೋಜ, ಹಿರಿಯ ಧರ್ಮಗುರು ವಂ|ವಲೇರಿಯನ್ ಮಸ್ಕರೇನ್ಹಸ್ ಮಿತ್ತೂರುರವರು ಸಹ ಬಲಿಪೂಜೆಯಲ್ಲಿ ಪಾಲ್ಗೊಂಡರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಪಾಲನಾ ಸಮಿತಿಯ ಸದಸ್ಯರು, ಚರ್ಚ್ ಸ್ಯಾಕ್ರಿಸ್ಟಿಯನ್ ಬ್ಯಾಪ್ಟಿಸ್ಟ್ ತಾವ್ರೋ, ವೇದಿ ಸೇವಕರು, ಗಾಯನ ಮಂಡಳಿರವರು ಸಹಕರಿಸಿದರು.

ಜಗತ್ತಿನೆಲ್ಲೆಡೆ ಮಾನವೀಯತೆಯ ಪ್ರೀತಿ ನೆಲೆಸಲಿ - ವಂ|ಸುನಿಲ್ ಜಾರ್ಜ್
ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‍ನಲ್ಲಿ ಪ್ರಧಾನ ದಿವ್ಯಬಲಿಪೂಜೆಯ ನೇತೃತ್ವವನ್ನು ಮಾೈದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್‍ನ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ವಹಿಸಿದ್ದರು. ಫಿಲೋಮಿನಾ ಕಾಲೇಜ್ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ|ಸುನಿಲ್ ಜಾರ್ಜ್ ಡಿ'ಸೋಜರವರು ಬೈಬಲ್ ವಾಚಿಸಿ ತಮ್ಮ ಸಂದೇಶದಲ್ಲಿ ಯೇಸುಕ್ರಿಸ್ತರು ತನ್ನ ಜೀವಿತಾವಧಿಯಲ್ಲಿ ತೋರಿಸಿದ ದಯೆ, ಪ್ರೀತಿ ಮತ್ತು ಕರುಣೆಯ ಜೀವನವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜಗತ್ತಿನೆಲ್ಲೆಡೆ ಮಾನವೀಯತೆಯ ಪ್ರೀತಿ ನೆಲೆಸಲು ಸಾಧ್ಯವಾಗುತ್ತದೆ.

ಮನುಷ್ಯ-ಮನುಷ್ಯನ ನಡುವೆ ಪ್ರೀತಿಯ ಬಾಂಧವ್ಯವನ್ನು ಉಂಟುಮಾಡಲು ಮತ್ತು ಪರಸ್ಪರ ಕ್ಷಮಾಪಣಾ ಗುಣವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇವರ ಹಾಗೂ ಮಾನವನ ನಡುವೆ ಉತ್ತಮ ಸಂಬಂಧವೇರ್ಪಡಿಸಲು ಯೇಸುಕ್ರಿಸ್ತರು ಭೂಮಿಗೆ ಬಂದುದಾಗಿದೆ ಎಂದ ಅವರು ಹಬ್ಬಗಳು ಎಂದಿಗೂ ಹೊರಗಿನ ಆಡಂಬರದ ಹಬ್ಬವಾಗದೆ ಪ್ರತಿಯೊಬ್ಬನ ಆತ್ಮೀಕ ಜೀವನದಲ್ಲಿ ದೇವರನ್ನು ನಿಸ್ವಾರ್ಥ ಮನೋಭಾವನೆಯಿಂದ ಸ್ವೀಕರಿಸುವ ಮೂಲಕ ಯೇಸುಕ್ರಿಸ್ತರ ಜನನ ಮನುಷ್ಯತ್ವಕ್ಕೆ ಪ್ರೇರಣೆಯಾಗಲಿ. ದೇವರನ್ನು ನಾವು ಎಲ್ಲೆಡೆ ಹುಡುಕಿಕೊಂಡು ಹೋಗಬೇಕಾಗಿಲ್ಲ. ಅವರು ನಮ್ಮೊಡನೆ ಯಾವಾಗಲೂ ಮನುಷ್ಯ ರೂಪದಲ್ಲಿ ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಅವರು ಹೇಳಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಪ್ರೊ|ಎಡ್ವಿನ್ ಡಿ'ಸೋಜ, ಕಾರ್ಯದರ್ಶಿ ಲಿಗೋರಿ ಸೆರಾವೋ, ಪಾಲನಾ ಸಮಿತಿಯ ಸದಸ್ಯರು, ವೇದಿ ಸೇವಕರು, ಗಾಯನ ಮಂಡಳಿರವರು ಸಹಕರಿಸಿದರು.

ಅಂತರಂಗದಲ್ಲಿ ಯೇಸು ಕ್ರಿಸ್ತರನ್ನು ಕಾಣುವಂತಾಗಬೇಕು - ವಂ| ಪ್ರಶಾಂತ್:
ಬನ್ನೂರು ಸಂತ ಅಂತೋನಿ ಚರ್ಚ್‍ನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‍ರವರು ಪ್ರಧಾನ ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿ, ಬೈಬಲಿನ ಮೇಲೆ ಸಂದೇಶ ನೀಡುತ್ತಾ, ಯೇಸು ದೇವರು ಮಾನವರಾಗಿ ಭೂಲೋಕಕ್ಕೆ ಬಂದಾಗ ಅವರಿಗೆ ಅರಮನೆಯಲ್ಲಿ ಅಥವಾ ಯಾರ ಮನೆಯಲ್ಲೂ ಸ್ವಾಗತ ಸಿಗಲಿಲ್ಲ. ಯೇಸು ಕ್ರಿಸ್ತರು ದನದ ಕೊಟ್ಟಿಗೆಯಲ್ಲಿ ಜನಿಸಿದರು. ಅನುಕೂಲವಂತರ ಮನೆಯಲ್ಲಿ ಜಾಗವಿರಲಿಲ್ಲ. ಏಕೆಂದರೆ ಅವರ ಹೃದಯದಲ್ಲಿ ಜಾಗವಿರಲಿಲ್ಲ. ಇವತ್ತು ಯೇಸು ಸ್ವಾಮಿಯ ಹುಟ್ಟುಹಬ್ಬ ಆಚರಿಸುತ್ತಿರುವಾಗ ನಾವು ದೇವರನ್ನು ದೀನ ದಲಿತರಲ್ಲಿ, ಬಡವರಲ್ಲಿ, ಹಸಿದವರಲ್ಲಿ ಕಾಣುವ ಅಗತ್ಯವಿದೆ ಎಂದ ಅವರು ಸಾಮಾಜಿಕ ಗೌರವ, ಪ್ರೀತಿ, ಶಾಂತಿ ಸಮಾನತೆಯ ಸಾರವೇ ಕ್ರಿಸ್‍ಮಸ್. ಸಮುದಾಯವನ್ನು ಪವಿತ್ರ ಪ್ರೀತಿಯಿಂದ ಕಾಣುವ ಮಾನವೀಯತೆಯ ಹಬ್ಬವೇ ಕ್ರಿಸ್‍ಮಸ್. ಯೇಸುಕ್ರಿಸ್ತರು ಮನುಷ್ಯರೊಡನೆ ವಾಸಿಸಿ ದಾರಿ ತಪ್ಪಿದವರನ್ನು ರಕ್ಷಿಸುವ ಮೂಲಕ ಜಗತ್ತಿಗೇ ಬೆಳಕಾದವರು. ಒಳ್ಳೆಯ ಮನಸ್ಸು, ಕ್ಷಮಾಪಣಾಗುಣ ಹಾಗೂ ಕರುಣೆಯನ್ನು ನಮ್ಮಲ್ಲಿ ಬೆಳೆಸಿಕೊಳ್ಳುವುದರ ಜೊತೆಗೆ ಅಂತರಂಗದಲ್ಲಿ ಯೇಸುಕ್ರಿಸ್ತರನ್ನು ಕಾಣುವಂತಾಗಬೇಕು ಎಂದು ಹೇಳಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಇನಾಸ್ ಗೊನ್ಸಾಲ್ವಿಸ್, ಕಾರ್ಯದರ್ಶಿ ವಿಲ್ಮಾ ಗೊನ್ಸಾಲ್ವಿಸ್, ಪಾಲನಾ ಸಮಿತಿಯ ಸದಸ್ಯರು, ವೇದಿ ಸೇವಕರು, ಗಾಯನ ಮಂಡಳಿರವರು ಸಹಕರಿಸಿದರು.

ಕ್ರಿಸ್‍ಮಸ್ ಕ್ಯಾರಲ್ಸ್: ದಿವ್ಯ ಬಲಿಪೂಜೆ ಮೊದಲು ಆಯಾ ಚರ್ಚ್‍ಗಳಲ್ಲಿ ಕ್ರಿಸ್‍ಮಸ್ ಭಕ್ತಿಗೀತೆ (ಕ್ಯಾರಲ್ಸ್)ಗಳನ್ನು ಹಾಡಲಾಯಿತು. ಸಾವಿರಾರು ಭಕ್ತರು ಆಯಾ ಚರ್ಚ್‍ಗಳಲ್ಲಿ ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ದಿವ್ಯ ಬಲಿಪೂಜೆ ಬಳಿಕ ಆಯಾ ಚರ್ಚ್‍ಗಳಲ್ಲಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಕೇಕ್ ಹಂಚಲಾಯಿತು. ಕ್ರೈಸ್ತ ವಿಶ್ವಾಸಿ ಬಾಂಧವರು ಪರಸ್ಪರ ಹಸ್ತಲಾಘವ ಮಾಡುತ್ತಾ, ಪರಸ್ಪರ ಆಲಿಂಗನ ಮಾಡುತ್ತಾ ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡರು. ಸಂಜೆ ಪುತ್ತೂರು ಮಾೈದೆದೇವುಸ್ ಚರ್ಚ್‍ನಲ್ಲಿ ಡೋನ್‍ಬಾಸ್ಕೊ ಕ್ಲಬ್ ನೇತೃತ್ವದಲ್ಲಿ, ಬನ್ನೂರು ಸಂತ ಅಂತೋನಿ ಚರ್ಚ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‍ನಲ್ಲಿ ಸಾಂಸ್ಕೃಋ ತಿಕ ಕಾರ್ಯಕ್ರಮಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News