ಪುತ್ತೂರು: ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
ಪುತ್ತೂರು,ಡಿ.25: ಸಂಪ್ಯ ಠಾಣೆಯಲ್ಲಿ ನಿರಂತರವಾಗಿ ಅಮಾಯಕ ಹಿಂದುಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಹಿಂದುಗಳನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ. ಇದಕ್ಕೆ ಕಾರಣವಾಗುತ್ತಿರುವ ಮತೀಯ ಶಕ್ತಿಗಳನ್ನು ಮಟ್ಟ ಹಾಕಬೇಕು. ವಿನಾ ಕಾರಣ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಇಲ್ಲಿನ ತಪ್ಪಿತಸ್ತ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾ ಮಾಡಬೇಕು ಇಲ್ಲವೇ ಇಲ್ಲಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು ಹೇಳಿದರು.
ಅವರು ಹಿಂದೂ ಹಿತ ರಕ್ಷಣಾ ಸಮಿತಿ ವತಿಯಿಂದ ಸೋಮವಾರ ಮಂಜಲ್ಪಡ್ಪು ಎಎಸ್‍ಪಿ ಕಚೇರಿ ಮುಂಭಾಗದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಂಪ್ಯ ಠಾಣೆಯ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಅಥವಾ ಸೇವೆಯಿಂದ ವಜಾ ಮಾಡಿ ಎಂದು ಇದೀಗ ನಾಲ್ಕನೆ ಬಾರಿಗೆ ಆಗ್ರಹ ಮಾಡುತ್ತಿದ್ದೇವೆ. ಈ ಹಿಂದೆ ಮಾಡಿರುವ ಯಾವುದೇ ಆಗ್ರಹಕ್ಕೆ ಸ್ಪಂದನೆ ಸಿಕ್ಕಿಲ್ಲ. ಜಿಲ್ಲೆಯ ಯಾವುದೇ ಠಾಣೆಯಲ್ಲಿ ನಡೆಯದ ದೌರ್ಜನ್ಯ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಮಾತ್ರ ನಡೆಯುತ್ತಿದೆ ಇದರ ಹಿಂದೆ ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಅನ್ಯಾಯಕ್ಕೊಳಗಾದ ಮಂದಿಗೆ ನ್ಯಾಯ ಒದಗಿಸಬೇಕು ಎಂಬ ಹಿನ್ನಲೆಯಲ್ಲಿ ಜ.2 ರಂದು ಪುತ್ತೂರಿನಲ್ಲಿ ಪಾದಯಾತ್ರೆ ಮತ್ತು ಪ್ರತಿಭಟನೆ ನಡೆಸಲಿದ್ದು, ಈ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಸಂದೇಶವನ್ನು ನೀಡಲಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹಿಂದು ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ತಾಲೂಕು ಪಂಚಾಯತ್ ಸದಸ್ಯ ನಿರಂಜನ್, ಬಜರಂಗದಳ ದಕ್ಷಿಣ ಪ್ರಾಂತ ಗೋ ರಕ್ಷಕ್ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ, ಬಿಜೆಪಿ ಮುಖಂಡರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಸಹಜ್ ರೈ ಬಳಜ್ಜ, ಜಯಂತಿ ನಾಯಕ್, ಜೀವಂಧರ್ ಜೈನ್, ಕೃಷ್ಣ ಶೆಟ್ಟಿ ಕಡಬ, ಲಕ್ಷಣ ಗೌಡ, ಗೌರಿ ಬನ್ನೂರು, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು, ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ರಾಮಣ್ಣ ಗೌಡ ಹಲಂಗ, ವಿನಯಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ತಾ,ಪಂ,ಸದಸ್ಯ ರಾಧಾಕೃಷ್ಣ ಬೋರ್ಕರ್ ಮನವಿ ವಾಚಿಸಿದರು. ಮನವಿಯನ್ನು ಎಎಸ್ಪಿ ಡಾ.ಅರುಣ್ ರವರಿಗೆ ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಯಿತು.