ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಕಿಸ್ಮಸ್
ಉಡುಪಿ, ಡಿ.25: ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.
ರವಿವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಹಬ್ಬದ ಅಂಗವಾಗಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಮಿಲಾಗ್ರಿಸ್ ಕ್ಯಾಥೆಡ್ರಲ್ ಕಲ್ಯಾಣಪುರದಲ್ಲಿ ಬಲಿಪೂಜೆಯನ್ನು ಅರ್ಪಿಸಿದರೆ, ಉಳಿದ ಚರ್ಚುಗಳಲ್ಲಿ ಧರ್ಮಗುರುಗಳು ಕ್ರಿಸ್ಮಸ್ ಬಲಿಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶವನ್ನು ನೀಡಿದರು.
ಉಡುಪಿ ಜಿಲ್ಲೆಯ ಪ್ರಮುಖ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದವು. ಚರ್ಚ್‌ಗಳು ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆಬಗೆಯ, ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ರವಿವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು, ದೇವರ ಸ್ತುತಿ, ಜೋಗುಳದ ಮೂಲಕ ಆರಾಧಿಸಿದರು. ಮೇಣದ ಬತ್ತಿ ಬೆಳಗಿದರು. ಹೂವು, ಸುಗಂಧ ಅರ್ಪಿಸಿದರು.
ಜಿಲ್ಲೆಯ ಪ್ರಮುಖ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ವಂ.ಸ್ಟ್ಯಾನಿ ತಾವ್ರೊ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಕುಂದಾಪುರದ ಹೋಲಿ ರೋಜರಿ ಚರ್ಚಿನಲ್ಲಿ ವಂ.ಅನಿಲ್ ಡಿಸೋಜಾ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ.ಜೋರ್ಜ್ ಡಿಸೋಜಾ, ಕುಂತಳನಗರ ಚರ್ಚಿನಲ್ಲಿ ವಂ.ಡೆನಿಸ್ ಡೆಸಾ, ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ವಂ.ಜೋನ್ ವಾಲ್ಟರ್ ಮೆಂಡೊನ್ಸಾ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆಯ ಬಲಿಪೂಜೆಗಳು ನಡೆದವು. ಇದಲ್ಲದೆ ಮೂಡುಬೆಳ್ಳೆ, ಬಾರ್ಕೂರು, ಉದ್ಯಾವರ, ಶಂಕರಪುರ, ಬ್ರಹ್ಮಾವರ ಹಾಗೂ ಇನ್ನಿತರ ಚರ್ಚುಗಳಲ್ಲಿಸಹ ಹಬ್ಬದ ಆಚರಣೆ ಜರಗಿದವು.
ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾದಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು.
ಕಾಪು ಶಾಸಕ ವಿನಯಕುಮಾರ್ ಸೊರಕೆ ತಮ್ಮ ಕ್ಷೇತ್ರ ವ್ಯಾಪ್ತಿಯ ಹೆಚ್ಚಿನೆಲ್ಲಾ ಚರ್ಚ್‌ಗಳಿಗೆ ಭೇಟಿ ನೀಡಿ ಕ್ರಿಶ್ಚಿಯನ್ ಬಾಂಧವರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ಹೇಳಿದರು.
ಹಬ್ಬದ ಅಂಗವಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ವಿಶೇಷ ಭಕ್ಷ್ಯ, ಭೋಜನ ಗಳನ್ನು ತಯಾರಿಸಿದ್ದರು. ಬಂಧು ಬಾಂಧವರು, ನೆರೆಹೊರೆ, ಸ್ನೇಹಿತರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಹಬ್ಬದ ಭೋಜನ ಸವಿದರು.
ಜಿಲ್ಲೆಯ ರೋಮನ್ ಕ್ಯಾಥೊಲಿಕ್ ಚರ್ಚುಗಳು ಮಾತ್ರವಲ್ಲದೆ ಸಿರೀಯನ್ ಕೆಥೊಲಿಕ್, ಪ್ರೊಟೆಸ್ಟೆಂಟ್, ಮೆಥೋಡಿಸ್ಟ್, ಯಹೋವನನ ಸಾಕ್ಷಿಗಳು, ನ್ಯೂ ಲೈಫ್ ಮತ್ತಿತರ ಪಂಥಗಳ ದೇವಾಲಯಗಳು ಹಾಗೂ ಮನೆಗಳಲ್ಲೂ ಆರಾಧನಾ ವೈವಿಧ್ಯತೆಯ ನಡುವೆಯ ಕ್ರಿಸ್‌ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.