ಅಪಹರಣ ಪ್ರಕರಣ: ಕಾಂಗ್ರೆಸ್ ಮುಖಂಡನ ಪುತ್ರನ ಬಂಧನ

Update: 2017-12-25 13:21 GMT

ಲಕ್ನೊ, ಡಿ.25: ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಾದ್‌ಶಾ ಸಿಂಗ್ ಅವರ ಪುತ್ರನ ಸಹಿತ ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನ್ನ ಪುತ್ರ ಶಿವಂನನ್ನು ಅಪಹರಿಸಿ ಗೋರಖ್‌ಪುರಕ್ಕೆ ಕೊಂಡೊಯ್ಯಲಾಗಿದೆ ಎಂದು ಡಿ.23ರಂದು ಅಮಿತ್ ಜೈಸ್ವಾಲ್ ಎಂಬಾತ ನೀಡಿದ ದೂರಿನನ್ವಯ ತನಿಖೆ ನಡೆಸಿದಾಗ ಅಪಹರಿಸಲ್ಪಟ್ಟ ಯುವಕನನ್ನು ಮಹೊಬ ಜಿಲ್ಲೆಗೆ ಕೊಂಡೊಯ್ದಿರುವುದು ಬೆಳಕಿಗೆ ಬಂದಿದೆ. ಬಳಿಕ ಖಚಿತ ಮಾಹಿತಿ ಮೇರೆಗೆ ಖರೇಲ ಗ್ರಾಮದ ಮನೆಯೊಂದಕ್ಕೆ ದಾಳಿ ನಡೆಸಿ ಮೂವರನ್ನು ಬಂಧಿಸಿ ಶಿವಂನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಸೂರ್ಯದೇವ್ ಸಿಂಗ್, ರಾಜೇಶ್ ಸಿಂಗ್ ಮತ್ತು ಗುನ್ನು ಎಂದು ಗುರುತಿಸಲಾಗಿದೆ. ಸೂರ್ಯದೇವ್ ಸಿಂಗ್ ಉತ್ತರಪ್ರದೇಶದ ಮಾಜಿ ಸಚಿವ, ರಾಜ್ಯ ಕಾಂಗ್ರೆಸ್‌ನ ಹಾಲಿ ಉಪಾಧ್ಯಕ್ಷ ಬಾದ್‌ಶಾ ಸಿಂಗ್ ಅವರ ಪುತ್ರ. ಶಿವಂ ಹಾಗೂ ಸೂರ್ಯದೇವ್ ಸ್ನೇಹಿತರಾಗಿದ್ದರು. ಶಿವಂನನ್ನು ಅಪಹರಿಸಿ, ಆತನ ತಂದೆಯಿಂದ 50 ಲಕ್ಷ ರೂ. ಒತ್ತೆಹಣ ಪಡೆಯುವುದು ಅಪಹರಣಾಕಾರರ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 2012ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಮೊದಲು ಬಾದ್‌ಶಾ ಸಿಂಗ್ ಬಿಎಸ್ಪಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. 2016ರ ನವೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News