ಡಿಜಿಟಲ್ ವಿಭಜನೆಯನ್ನು ಅಂತ್ಯಗೊಳಿಸಲು ಕ್ರಮಕ್ಕೆ ಯುನಿಸೆಫ್ ಕರೆ
ಕೋಲ್ಕತಾ,ಡಿ.25: ಕನಿಷ್ಠ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳಲ್ಲಿ ಶೇ.15ರಷ್ಟು ಜನರು ಮಾತ್ರ ಅಂತರ್ಜಾಲ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಯುನಿಸೆಫ್ ವರದಿಯು ಬಹಿರಂಗಗೊಳಿಸಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಈ ಪ್ರಮಾಣ ಅಂದಾಜು ಶೇ.81ರಷ್ಟಿದೆ ಎಂದು ಭಾರತ ಸೇರಿದಂತೆ 24 ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಅಧ್ಯಯನದ ವರದಿಯು ತಿಳಿಸಿದೆ.
ಡಿಜಿಟಲ್ ವಿಭಜನೆಯು ಅಂತರ್ಜಾಲದೊಂದಿಗೆ ನಂಟು ಹೊಂದದವರಿಂದ ಅಂತರ್ಜಾಲ ಸಾಕ್ಷರರನ್ನು ಪ್ರತ್ಯೇಕಿಸುವುದು ಮಾತ್ರವಲ್ಲ, ಯುವಜನರು ಮತ್ತು ಮಕ್ಕಳು ಸೇರಿದಂತೆ ಜನರು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿ)ವನ್ನು ಹೇಗೆ ಬಳಸುತ್ತಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ಗಾಢ ಪರಿಣಾಮವನ್ನೂ ಹೊಂದಿದೆ ಎಂದು ಕಳೆದ ವಾರ ಇಲ್ಲಿ ವರದಿ ಬಿಡುಗಡೆ ಸಂದರ್ಭ ಯುನಿಸೆಫ್ ವಕ್ತಾರರು ಹೇಳಿದರು.
ಐಸಿಟಿ ಅನುಭವವು ಆಸ್ಟ್ರೇಲಿಯಾ ಮತ್ತು ಅಮೆರಿಕದಂತಹ ರಾಷ್ಟ್ರಗಳಲ್ಲಿ ಕಾರ್ಮಿಕರ ವೇತನಗಳ ಮೇಲೆ ಬೃಹತ್ ಪರಿಣಾಮವನ್ನು ಹೊಂದಿದೆ ಎಂದು ತೋರಿಸಲು ವರದಿಯು ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳ ದತ್ತಾಂಶಗಳನ್ನು ಉಲ್ಲೇಖಿಸಿದೆ. ಐಸಿಟಿ ಅನುಭವವಿಲ್ಲದ ವಯಸ್ಕರು ಕಡಿಮೆ ಆದಾಯ ಗಳಿಸುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಭಾರತ ಮತ್ತು ಟ್ಯುನಿಷಿಯಾಗಳಂತಹ ರಾಷ್ಟ್ರಗಳಲ್ಲಿ ವಯಸ್ಕರ ಕುರಿತು ಇತರ ಅಧ್ಯಯನಗಳು ಇಂತಹುದೇ ಅಂಶಗಳನ್ನು ಪ್ರತಿಫಲಿಸಿವೆ ಎಂದು ವರದಿಯು ಹೇಳಿದೆ.
15ರಿಂದ 24 ವರ್ಷ ವಯೋಮಾನದ ಶೇ.29ರಷ್ಟು ಯುವಜನರಿಗೆ ಅಂತರ್ಜಾಲ ಪ್ರವೇಶ ಸಾಧ್ಯವಾಗಿಲ್ಲ ಮತ್ತು ಮಕ್ಕಳ ವಿಷಯದಲ್ಲಿ ಇದು ತದ್ವಿರುದ್ಧವಾಗಿದೆ. ವಿಶ್ವಾದ್ಯಂತ 15 ವರ್ಷಕ್ಕಿಂತ ಕೆಳಗಿನ ಕೇವಲ ಶೇ.30ರಷ್ಟು ಮಕ್ಕಳಿಗೆ ಡಿಜಿಟಲ್ ಮಾಧ್ಯಮಗಳ ನಂಟು ಸಾಧ್ಯವಾಗಿದೆ ಎಂದಿರುವ ವರದಿಯು, ಅಂತರ್ಜಾಲ ಸಂಪರ್ಕವಿಲ್ಲದ ಮಕ್ಕಳು ಸಮೃದ್ಧ ಶೈಕ್ಷಣಿಕ ಸಂಪನ್ಮೂಲಗಳು, ಜಾಗತಿಕ ಮಾಹಿತಿ ಮತ್ತು ಕಲಿಯುವಿಕೆಯ ಆನ್‌ಲೈನ್ ಅವಕಾಶಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಹೊಸ ಗೆಳೆತನಗಳನ್ನು ವಿಸ್ತರಿಸಿಕೊಳ್ಳುವ ಮತ್ತು ಸ್ವಯಂ-ಅಭಿವ್ಯಕ್ತಿಯ ಮಾರ್ಗಗಳಿಂದ ಅವರು ವಂಚಿತರಾಗುತ್ತಿದ್ದಾರೆ ಎಂದು ಹೇಳಿದೆ.
ಇದನ್ನು ಡಿಜಿಟಲ್ ವಿಭಜನೆ ಎಂದು ಕರೆದಿರುವ ವರದಿಯು, ಈ ಅಂತರವು ಶ್ರೀಮಂತ ಹಿನ್ನೆಲೆಯ ಮಕ್ಕಳಿಗೆ ಲಾಭಗಳನ್ನು ಹೆಚ್ಚಿಸುತ್ತದೆ ಮತ್ತು ಬಡವರು ಅವಕಾಶಗಳಿಂದ ವಂಚಿತರಾಗಿಯೇ ಉಳಿಯುತ್ತಾರೆ ಎಂದಿದೆ.