ಮೆರವಣಿಗೆ ಹೊರಟ ಭಕ್ತಾದಿಗಳಿಗೆ ಮುಸ್ಲಿಮರಿಂದ ಹಣ್ಣು, ತಂಪು ಪಾನೀಯ ವಿತರಣೆ
ಮಂಗಳೂರು, ಡಿ. 25: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಕುದ್ರೋಳಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಹೊರಟ ಭಕ್ತಾದಿಗಳಿಗೆ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ ಮುಸ್ಲಿಮರು ಪಾನೀಯ, ಹಣ್ಣುಗಳನ್ನು ವಿತರಣೆ ಮಾಡಿದರು.
ಮೌಲಾನ ಅಲ್‌ಹಾಜ್ ಇ.ಎಂ.ಶಾಫಿ ಪುತ್ತಿಗೆ ಸ್ಮರಣಾರ್ಥ ಅವರ ಶಿಷ್ಯಂದಿರು ಮತ್ತು ಅಭಿಮಾನಿಗಳು ಮಜ್ಜಿಗೆ, ಬಾಳೆಹಣ್ಣು, ಜ್ಯೂಸ್‌ಗಳನ್ನು ವಿತರಿಸಿದರು. ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಅವರೆಲ್ಲರಿಗೂ ಪಾನೀಯ, ಹಣ್ಣುಗಳನ್ನು ವಿತರಿಸಲಾಯಿತು.
‘ನಂಡೆ ಪೆಂಙಳ್’ ಅಭಿಯಾನದ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಸಲಹೆಗಾರರಾದ ಉಮರ್ ಪುತ್ತಿಗೆ, ರಫೀಕ್ ಮಾಸ್ಟರ್, ಸದಸ್ಯರಾದ ಮಜೀದ್ ತುಂಬೆ, ಅಶ್ಫರ್ ಬೆಂಗರೆ, ನಕಾಶ್ ಬಾಂಬಿಲ, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಪರ್ವೇಝ್, ಅತಾವುಲ್ಲಾಹ್, ನಾಸಿರ್, ಅಶ್ಫಾಕ್, ಅಬ್ದುಲ್ಲಾ ಕುದ್ರೋಳಿ ಮೊದಲಾದವರು ಭಕ್ತರಿಗೆ ಪಾನೀಯ ಹಾಗೂ ಬಾಳೆಹಣ್ಣುಗಳನ್ನು ವಿತರಿಸಿದರು.
ಹೊರೆಕಾಣಿಕೆ ಮೆರವಣಿಗೆಯಲ್ಲಿ ಶ್ರೀ ಗರೋಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್, ಹೊರೆಕಾಣಿಕೆ ಸಂಚಾಲಕ ದಾಮೋದರ ನಿಸರ್ಗ, ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿ ಸಂಚಾಲಕ ವಸಂತ ಪೂಜಾರಿ, ಶ್ರೀ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಜಗದೀಶ್ ಡಿ.ಸುವರ್ಣ, ಕ್ಷೇತ್ರದ ವ್ಯವಸ್ಥಾಪಕ ಕಿಶೋರ್ ಮಜಿಲ, ದಿನೇಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ನವೀಕರಣಗೊಂಡ ಕ್ಷೇತ್ರದ ಉತ್ತರ ದಿಕ್ಕಿನ ಪೌಳಿಯ ಉದ್ಘಾಟನೆಯು ಡಿ. 26ರಂದು ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಪೌಳಿಯ ಉದ್ಘಾಟನೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಡಿ.26ರಿಂದ 28ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ಕ್ಷೇತ್ರದಿಂದ ಮಂಗಳವಾರ ಸೋಮವಾರ ಸಂಜೆ ಹೊರಕಾಣಿಕೆಗಳನ್ನು ಹೊತ್ತ ಮೆರವಣಿಗೆಯು ಮಣ್ಣಗುಡ್ಡೆ, ಲೇಡಿಹಿಲ್, ಪಿವಿಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ, ಕಂಕನಾಡಿಯ ಮೂಲಕ ಪಂಪ್‌ವೆಲ್ ವೃತ್ತ ಮಾರ್ಗವಾಗಿ ಶ್ರೀ ಗರಡಿ ಕ್ಷೇತ್ರಕ್ಕೆ ಹೊರಟಿತ್ತು.
ಕೋಮು ಸೌಹಾರ್ದದ ಪ್ರತೀಕ: ವಂಸತ ಪೂಜಾರಿ
ಹೊರೆಕಾಣಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮುಸ್ಲಿಮರು ಪಾನೀಯ ಮತ್ತು ಬಾಳೆ ಹಣ್ಣುಗಳನ್ನು ವಿತರಣೆ ಮಾಡಿರುವುದು ಕೋಮು ಸೌಹಾರ್ದದ ಪ್ರತೀಕವಾಗಿದೆ ಎಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿಯ ಸಂಚಾಲಕ ವಸಂತ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ಧರ್ಮದವರು, ಇನ್ನೊಂದು ಧರ್ಮದವರನ್ನು ಬರಮಾಡಿಕೊಳ್ಳುವುದು, ಸಹಕಾರ ನೀಡುವುದು ಕೋಮು ಸೌಹಾರ್ದಕ್ಕೆ ಪ್ರತೀಕವಾಗಿದೆ. ಭಕ್ತಾದಿಗಳನ್ನು ಬರಮಾಡಿಕೊಂಡು ಅವರಿಗೆ ಹಣ್ಣು, ಪಾನೀಯಗಳನ್ನು ವಿತರಿಸಿರುವ ಮುಸ್ಲಿಂ ಬಾಂಧವರಿಗೆ ಅನಂತ... ಅನಂತ ಧನ್ಯವಾದಗಳು ಎಂದಿದ್ದಾರೆ.
ಧರ್ಮ ಬೇಧ ಮರೆತು ಸಹಕರಿಸಿದ್ದಾರೆ: ಕೆ.ಚಿತ್ತರಂಜನ್
ಕುದ್ರೋಳಿ ಶ್ರೀ ಕ್ಷೇತ್ರದಿಂದ ಗರೋಡಿ ಶ್ರೀ ಕ್ಷೇತ್ರಕ್ಕೆ ಕಡೆಗೆ ಹೊರಟ ಹೊರೆ ಕಾಣಿಕೆ ಮೆರವಣಿಗೆಯನ್ನು ಕಂಕನಾಡಿ ಬೈಪಾಸ್ ರಸ್ತೆಯಲ್ಲಿ ಬರಮಾಡಿಕೊಂಡು ಧರ್ಮ ಭೇದ ಮರೆತು ಮುಸ್ಲಿಂ ಬಾಂಧವರು ಸಹಕಾರ ನೀಡಿದ್ದಾರೆ ಎಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಹೇಳಿದ್ದಾರೆ.