×
Ad

ನವ ಉದಾರೀಕರಣ, ಕೋಮುವಾದ ಅಪಾಯಕಾರಿ ಸವಾಲು : ಶ್ರೀರಾಮರೆಡ್ಡಿ

Update: 2017-12-25 20:27 IST

ಬೈಂದೂರು, ಡಿ.25: ನವ ಉದಾರೀಕರಣ ಮತ್ತು ಕೋಮುವಾದ ನಮ್ಮ ಮುಂದೆ ಇರುವ ಎರಡು ಅಪಾಯಕಾರಿ ಸವಾಲುಗಳಾಗಿವೆ. ಈ ಹಿಂದಿನ ಯುಪಿಎ ಸರಕಾರದ ಆರ್ಥಿಕ ನೀತಿಯನ್ನೇ ಈಗಿನ ನರೇಂದ್ರ ಮೋದಿ ಸರಕಾರ ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದ್ದಾರೆ.

ಬೈಂದೂರಿನಲ್ಲಿ ರವಿವಾರದಿಂದ ಆಯೋಜಿಸಲಾದ ಸಿಪಿಎಂ ಪಕ್ಷದ ಉಡುಪಿ ಜಿಲ್ಲಾ 6ನೆ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಆರ್ಥಿಕ ಸಂಪತ್ತಿನ ಶೇಖರಣೆ ಒಂದೇ ಕಡೆ ಕೇಂದ್ರೀಕೃತವಾಗುತ್ತಿದೆ. ಇದರಿಂದ ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ವೃದ್ಧಿಯಾಗುತ್ತಿದೆ ಎಂದರು.
 
ದೇಶದಲ್ಲಿ ಮಾನವ ಅಭಿವೃದ್ಧಿ ಕುಸಿಯುತ್ತಿದೆ. ಹಸಿವು, ಬಡತನ ನೀರುದ್ಯೋಗ ಹಾಗೂ ಪೌಷ್ಠಿಕಾಂಶ ಆಹಾರದ ಕೊರತೆಯಿಂದ ಜನ ಬಳಲುತ್ತಿದ್ದಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ 1.46ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾಮಿನಾಥನ್ ವರದಿ ಜಾರಿ ಮಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಶ್ರೀಮಂತ ಉದ್ಯಮಿಗಳ ಬ್ಯಾಂಕಿನ ಸಾಲವನ್ನು ಮನ್ನಾ ಮಾಡುವ ಸರಕಾರಕ್ಕೆ ರೈತರ ಸಾಲಮನ್ನಾ ಮಾಡಲು ಆಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಇಳಿಸಲಾಗಿದೆ ಎಂದು ಅವರು ದೂರಿದರು.

ಕೇಂದ್ರ ಸರಕಾರದ ವಿಫಲತೆಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಜನರನ್ನು ದಿಕ್ಕು ತಪ್ಪಿಸಿ ಕೋಮುವಾದವನ್ನು ಹರಿಯ ಬಿಡಲಾಗುತ್ತಿದೆ. ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರು ಹಾಗೂ ದಲಿತರ ಮಾರಣಹೋಮ ನಡೆಸಲಾಗುತ್ತಿದೆ. ಹಿಂದುತ್ವ ವಿರೋಧಿಸುವವರನ್ನು ದೇಶದ್ರೋಹಿ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಅವರು ಹೇಳಿದರು.

ಬಹುಸಂಸ್ಕೃತಿ, ಬಹುಭಾಷೆ, ಬಹುಧರ್ಮ, ಬಹುಜನಾಂಗದ ಭವ್ಯ ಭಾರತ ವನ್ನು ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂಬುದಾಗಿ ಘೋಷಣೆ ಮಾಡಿ ಭಾರತದ ಭವ್ಯತೆಯನ್ನು ನಾಶ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ದೇಶದ ಬೌದ್ಧಿಕ ವಿದ್ಯಾಕೇಂದ್ರಗಳ ಮೇಲೆ ದಾಳಿ ಮಾಡಿ, ವಿಜ್ಞಾನವನ್ನು ಮೌಡ್ಯವನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಹಿರಿಯ ಮುಖಂಡ ಯು.ದಾಸ ಭಂಡಾರಿ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್, ಜಿಲ್ಲಾ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್. ನರಸಿಂಹ, ಸುರೇಶ್ ಕಲ್ಲಾಗರ, ಮಹಾಬಲ ವಡೇರಹೋಬಳಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News