×
Ad

ನನ್ನ ಕ್ಷೇತ್ರದ ಅಭಿವೃದ್ಧಿಯ ಶ್ರೇಯಸ್ಸು ಪತ್ರಕರ್ತರಿಗೆ ಸಲ್ಲಬೇಕು : ಮಾಂಕಾಳ್ ವೈದ್ಯ

Update: 2017-12-25 21:07 IST

ಭಟ್ಕಳ,ಡಿ.25: ಭಟ್ಕಳ - ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆಗೊಂಡಿರುವ 1500ಕೋಟಿ ರೂ. ಅನುದಾನದ ಶ್ರೇಯಸ್ಸು ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಸಲ್ಲುತ್ತದೆ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದರು. 

ಅವರು ರವಿವಾರ ರಾತ್ರಿ ಇಲ್ಲಿನ ಸಾಗರ ರಸ್ತೆಯ ಶ್ರೀಗುರುಸುಧೀಂದ್ರ ಕಾಲೇಜು ಮೈದಾನದಲ್ಲಿ ಭಟ್ಕಳ ತಾಲೂಕು ಕಾರ್ಯನಿರತ ಸಂಘದ ಬೆಳ್ಳಿಹಬ್ಬ ಸಂಭ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

ಬಡವರ ಪರ ಕಾಳಜಿ ಹೊಂದಿದ ಪತ್ರಕರ್ತರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದು ಇಲ್ಲಿನ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ. ನಾನು ಆರಂಭದಿಂದಲೂ ಕ್ಷೇತ್ರದ ಪ್ರಗತಿ ಕುರಿತು ಚಿಂತಿತನಾಗಿದ್ದೆ, ಪತ್ರಕರ್ತರು ನನ್ನನ್ನು ಎಚ್ಚರಿಸುವ ಕೆಲಸ ಮಾಡಿದರು.

ಅದಕ್ಕಾಗಿ ಕ್ಷೇತ್ರ ಅಭಿವೃದ್ಧಿಗಾಗಿ 1500 ಕೋ. ರೂ ಅನುದಾನ ಬಿಡುಗಡೆಗೊಂಡಿದೆ ಎಂದ ಅವರು ಭಟ್ಕಳ ಕಾರ್ಯನಿರತ ಪತ್ರಕರ್ತರ ಸದಸ್ಯರು ಸಮಾಜಮುಖಿ ಚಿಂತನೆಯುಳ್ಳವರು ಎಂದರು. ತಾಲೂಕಿನ 7ಸಾವಿರ ಮನೆಗೆ ವಿದ್ಯುತ್ ನೀಡುವಲ್ಲಿ ನಾನು ಸಫಲವಾಗಿದ್ದೇನೆ. ನನ್ನ ಕ್ಷೇತ್ರ ಇಡೀ ದೇಶಕ್ಕೆ ವಿದ್ಯುತ್ ನೀಡಿದೆ. ನನ್ನಿಂದ ಯಾವ ರೀತಿಯ ಸಹಾಯ, ಸಹಕಾರ ಮಾಡಲು ಸಾಧ್ಯವಾಯಿತೋ ಅದೆಲ್ಲವನ್ನೂ ಮಾಡಿದ್ದೇನೆ. ಇದಕ್ಕೆಲ್ಲ ಪತ್ರಕರ್ತರೇ ಕಾರಣೀಕರ್ತರು. ನಾನು ಕಷ್ಟದಿಂದ ಬಂದವನು ಸಮಾಜದ ಕಷ್ಟನಷ್ಟಗಳನ್ನು ಅನುಭವಿಸಿದ್ದೇನೆ. ಇದಕ್ಕೆ ಪತ್ರಕರ್ತರು ನನ್ನನ್ನು ಎಚ್ಚರಿಸುವ ಕೆಲಸ ಮಾಡಿದ್ದು ಅದನ್ನು ಕಾರ್ಯರೂಪಕ್ಕೆ ತಂದಿದ್ದೇನೆ ಎಂದರು. ಎಲ್ಲಾ ರಾಜಕಾರಣಿಕಾರಣಿಗಳು ಕೆಟ್ಟವರಲ್ಲ. ಹಾಗೆ ಎಲ್ಲ ಪತ್ರಕರ್ತರೂ ಕೆಟ್ಟವರಲ್ಲ ಒಳ್ಳೆಯವರು ಸಮಾಜದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಆ ಒಳ್ಳೆಯವರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದರು. 

ಸ್ಮರಣ ಸಂಚಿಕೆ ‘ಸವಿನೆನಪು’ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ರಮ್ಜಾನ್ ದರ್ಗಾ,ಈ ನಾಡು ಭಟ್ಕಾಕಳಂಕನ ನಾಡು. ಜೈನಧರ್ಮದ ಆಶಯಗಳೊಂದಿಗೆ ಬೆಳೆದ ಭಟ್ಕಳ ಅಹಿಂಸಾ ಪರಮೋಧರ್ಮ ಎಂಬ ಮಾತುಗಳಿಂದ ಪ್ರೇರಣೆ ಪಡೆದು ನಡೆಬೇಕು, ಮನುಷ್ಯ ಜಾತಿ ಒಂದೇ ಸತ್ಯ ಎಂಬ ತತ್ವದಡಿ ಬದುಕು ಸಾಗಿಸಬೇಕು ಈ ಹಿನ್ನೆಯಲ್ಲಿ ಭಟ್ಕಳದ ಜನತೆ ಚಿಂತಿಸಬೇಕು ಎಂದು ಅವರು ಕರೆ ನೀಡಿದರು. ಪತ್ರಕರ್ತ ತನ್ನ ಧರ್ಮವನ್ನು ಅರಿತು ನಡೆಬೇಕು. ಅವನು ಹಿಂದೂ,ಮುಸ್ಲಿಂ, ಕ್ರೈಸ್ತನಾಗಿರಬಹುದು. ಆದರೆ ಪತ್ರಿಕಾಧರ್ಮವನ್ನು ಮರೆಯಬಾರದು. ಸಮಾಜದ ಏಳಿಗೆಗಾಗಿ ನಮ್ಮ ಲೇಖನಿಯನ್ನು ಬಳಸಬೇಕು ಎಂದರು. 

ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಎನ್. ರಾಜು, ಈ ಸಂದರ್ಭದಲ್ಲಿ ಮಾತನಾಡಿದರು. ಸನ್ಮಾನಿತಗೊಂಡ ಸಾಧಕರಾದ ವಿವೇಕ ಮಹಾಲೆ, ಆಫ್ತಾಬ್ ಹುಸೇನ್ ಕೋಲಾ, ಶ್ವೇತಾ ಆಚಾರ್ಯ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 

ಬೆಳ್ಳಿಹಬ್ಬ ಸಂಭ್ರಮದ ಗೌರವಾಧ್ಯಕ್ಷ ಹಾಗೂ ಶಾಸಕರಾದ ಮಾಂಕಾಳ್ ವೈದ್ಯ, ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ್, ಉದ್ಯಮಿ ಶಿವಾನಿ ಶಾಂತರಾಮ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ  ಸಂಘದ ಮಾಜಿ ಅಧ್ಯಕ್ಷರುಗಳಾದ ಸತೀಶ್ ನಾಯ್ಕ, ಕರಿಯಪ್ಪ ನಾಯ್ಕ, ರಾಘವೇಂದ್ರ ಹೆಬ್ಬಾರ್ ಹಾಗೂ ಸ್ಥಾಪಕ ಅಧ್ಯಕ್ಷ ರಾಧಕೃಷ್ಣ ಭಟ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.  ಸಂಘದಿಂದ ಪತ್ರಿಕಾವಿತರಕರಿಗೆ ಸೈಕಲ್ ವಿತರಣೆಯ ಯೋಜನೆಯ ಅಂಗವಾಗಿ ಶಾಸಕ ವೈದ್ಯರು ಇಬ್ಬರು ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆ ಮಾಡಿದರು. 

ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝೀಯಾ, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಭ್ರಾಯ ಭಟ್ ಬಕ್ಕಳ, ಎಂ.ಆರ್.ಮಾನ್ವಿ, ಫಯಾಝ್ ಮುಲ್ಲಾ, ಮೋಹನ್ ನಾಯ್ಕ ಮತ್ತಿತರರು  ಉಪಸ್ಥಿತಿರಿದ್ದರು. 

ಸಂಘದ ಅಧ್ಯಕ್ಷ ರಾಧಕೃಷ್ಣ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಭಾಸ್ಕರ್ ನಾಯ್ಕ ಸ್ವಾಗತಿಸಿದರು. ಸಹಕಾರ್ಯದರ್ಶಿ ಮೋಹನ್ ನಾಯ್ಕ ಧನ್ಯವಾದ ಅರ್ಪಿಸಿದರು. ಶ್ರೀಧರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News