'ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಹಕರ ಪಾತ್ರ' ಕುರಿತು ಉಪನ್ಯಾಸ
ಉಡುಪಿ, ಡಿ.26: ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ರಾಷ್ಟ್ರೀಯ ಗ್ರಾಹಕ ದಿನಾಚರಣೆಯ ಅಂಗವಾಗಿ ‘ಸ್ವಚ್ಛ ಭಾರತ ಅಭಿಯಾನ ದಲ್ಲಿ ಗ್ರಾಹಕರ ಪಾತ್ರ’ ಕುರಿತ ಉಪನ್ಯಾಸ ಕಾರ್ಯಕ್ರಮವು ಮಂಗಳವಾರ ಜಿಲ್ಲಾ ಗ್ರಾಹಕರ ಕೇಂದ್ರದಲ್ಲಿ ಜರಗಿತು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಉಪನ್ಯಾಸ ನೀಡಿ, ಶೌಚಾಲಯಗಳ ನಿರ್ಮಿಸುವ ಮೂಲಕ ಸ್ವಚ್ಛ ಭಾರತದ ಕಲ್ಪನೆಯನ್ನು ಮಹಾತ್ಮ ಗಾಂಧಿಜೀ ಆರಂಭಿಸಿದ್ದರು. ಸರಕಾರಗಳ ಬದಲಾವಣೆಯಿಂದಾಗಿ ಹೊಸ ಹೊಸ ಚಿಂತನೆಗಳು ಬೆಳೆಯುತ್ತವೆ. ಹಾಗಾಗಿ ಈಗ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತಕ್ಕೆ ಹೊಸ ರೂಪ ನೀಡಿದರು. ಈ ಅಭಿಯಾನದಲ್ಲಿ ಗ್ರಾಹಕರ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.
ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಆಶು ಭಾಷಣ ಸ್ಪರ್ಧಾ ವಿಜೇತರಾದ ವಳಕಾಡು ಶಾಲೆಯ ನಚಿಕೇತ, ಆದಿಉಡುಪಿ ಶಾಲೆಯ ನಂದನ, ನಿಟ್ಟೂರು ಪ್ರೌಢಶಾಲೆಯ ಮನೋಹರ್ ಅವರಿಗೆ ಈ ಸಂದರ್ದಲ್ಲಿ ಬಹುಮಾನ ವಿತರಿಸಲಾಯಿತು.
ಬಳಕೆದಾರರ ವೇದಿಕೆಯ ಸಂಚಾಲಕ ದಾಮೋದರ್ ಐತಾಳ್ ಸ್ವಾಗತಿಸಿದರು. ವಿಶ್ವಸ್ಥ ಎಚ್.ಶಾಂತರಾಜ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾದಿರಾಜ ಆಚಾರ್ಯ ವಂದಿಸಿದರು. ಎ.ಪಿ.ಕೊಡಂಚ ಕಾರ್ಯಕ್ರಮ ನಿರೂ ಪಿಸಿದರು.