ಈದ್ಗಾ ನಮಾಝ್ ಸ್ಥಳ ಒತ್ತುವರಿ ವಿವಾದ: ಮುಸ್ಲಿಮ್ ಪ್ರತಿನಿಧಿಗಳ ನೇತೃತ್ವದಲ್ಲಿ ಪ್ರಕರಣ ಸುಖಾಂತ್ಯ
ಮಂಗಳೂರು, ಡಿ.26: ನಗರದ ಬಾವುಟಗುಡ್ಡೆಯ ಈದ್ಗಾ ಮಸೀದಿಯ ಪಕ್ಕದ ನಮಾಝ್ ಸ್ಥಳ ಒತ್ತುವರಿ ವಿವಾದ ಸುಖಾಂತ್ಯಗೊಂಡಿದೆ.
ಇಲ್ಲಿ ಪ್ರತಿ ವರ್ಷ ಮುಸ್ಲಿಮರು ಈದ್ ನಮಾಝ್ ನಿರ್ವಹಿಸುತ್ತಿದ್ದು, ಈ ಸ್ಥಳವನ್ನು ಖಾಸಗಿ ವಸತಿ ಸಮುಚ್ಚಯದ ಸಂಪರ್ಕ ದಾರಿ ಉದ್ದೇಶಕ್ಕಾಗಿ ಒತ್ತುವರಿಗೊಳಿಸಲು ಪ್ರಯತ್ನಿಸಿ ಇಂಟರ್‌ಲಾಕ್ ಅಳವಡಿಸುವಾಗ ಮಸೀದಿ ಆಡಳಿತ ಮಂಡಳಿಯನ್ನೊಳಗೊಂಡಂತೆ ವಿವಿಧ ಸಂಘಟನೆಗಳ ಸದಸ್ಯರು ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ನೇತೃತ್ವದಲ್ಲಿ ಆಕ್ಷೇಪ ವ್ಯಕ್ತಪಡಿಸಿ ತಡೆ ಹಿಡಿದಿದ್ದರು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಎ.ಸಿ ವಿನಯರಾಜ್ ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಮಂಗಳವಾರ ಪರಸ್ಪರ ಮಾತುಕತೆ ನಡೆಸಿ ಪ್ರಸ್ತುತ ಇರುವ ರಸ್ತೆಯನ್ನು 3 ಅಡಿ ಹೆಚ್ಚುವರಿ ಅಗಲಗೊಳಿಸಲು ಬಿಟ್ಟುಕೊಡಲು ಒಪ್ಪಿಗೆ ನೀಡಲಾಯಿತು.
ಮಾತುಕತೆಯ ವೇಳೆ ಝೀನತ್ ಭಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯ ಆಡಳಿತ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಮಾಜಿ ಮೇಯರ್ ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಕೋಶಾಧಿಕಾರಿ ಸೈಯದ್ ಬಾಷಾ ತಂಙಳ್, ಸದಸ್ಯರಾದ ಎಸ್.ಎಂ ರಶೀದ್ ಹಾಜಿ, ಹಾಜಿ ಐ. ಮೊಯ್ದಿನಬ್ಬ, ಒಕ್ಕೂಟ ಸದಸ್ಯರಾದ ಸಿದ್ದೀಕ್ ತಲಪಾಡಿ, ಝಾಕಿರ್ ಉಳ್ಳಾಲ ಹಾಗೂ ಪಿ.ಎಫ್.ಐ, ಸ್ಕ್ರಾಫ್ ಮಾರಾಟಗಾರರು, ಮಂಗಳೂರು ಸೋಶಿಯಲ್ ಸೆಂಟರ್, ಬಂದರ್ ಫ್ರೆಂಡ್ಸ್, ಹರೀಕೇನ್ ಕಸಾಯಿಗಲ್ಲಿ, ಫ್ರೆಂಡ್ಸ್ ಟಿ.ಸಿ ಗ್ರೂಫ್‌ನ ಸದಸ್ಯರು, ಟೂರಿಸ್ಟ್ ಕ್ಯಾಬ್ ಅಪರೇಟರ್ಸ್ ಮತ್ತು ಕಾರ್ಪೊರೇಟರ್ ಎ.ಸಿ ವಿನಯರಾಜ್ ಪಾಲ್ಗೊಂಡಿದ್ದರು.