ಮೋದಿಯನ್ನು ‘ಬ್ಯಾಡ್ ಸಾಂತಾ’ ಎಂದ ಕಾಂಗ್ರೆಸ್
ಹೊಸದಿಲ್ಲಿ, ಡಿ.26 : ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಜಾರಿಗೊಳಿಸಿ ಜನರನ್ನು ಸಂಕಷ್ಟಕ್ಕೆ ದೂಡಿರುವ ಪ್ರಧಾನಿ ನರೇಂದ್ರ ಮೋದಿ ಸಿನೆಮಾಗಳಲ್ಲಿರುವ ‘ಬ್ಯಾಡ್ ಸಾಂತಾ’ನಂತೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕ್ರಿಸ್ಮಸ್ ಮರುದಿನ ಟ್ವೀಟ್ ಮಾಡಿದ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ‘‘ಜಗತ್ತಿನ ಉಳಿದೆಡೆ ಬಿಳಿ ಗಡ್ಡದ ವೃದ್ಧನೆಂದರೆ ಸಾಂತಾ ಕ್ಲಾಸ್ ಎಂದೂ ಆತ ತನ್ನೊಂದಿಗೆ ಉಡುಗೊರೆಗಳನ್ನು ಹಾಗೂ ಹಣವನ್ನೂ ತರುತ್ತಾನೆಂಬ ನಂಬಿಕೆಯದೆ. ಆದರೆ ಭಾರತದಲ್ಲಿ ಅಂತಹುದೇ ಬಿಳಿ ಗಡ್ಡದ ವೃದ್ಧರೊಬ್ಬರು ಅದಕ್ಕೆ ತದ್ವಿರುದ್ಧವಾಗಿ ಮಾಡುತ್ತಿದ್ದಾರೆ. ಅವರು ಜನರಲ್ಲಿದ್ದ ಹಣವನ್ನೆಲ್ಲಾ ಕಸಿದು ಅವರ ಬಳಿ ಕೇವಲ ಸಾಕ್ಸ್ ಇರುವಂತೆ ಮಾಡಿದ್ದಾರೆ. ಸಾಂತಾ ಕ್ಲಾಸ್ ನಂತೆ ಚಿಮಿಣಿಯಿಂದ ಬರುವ ಬದಲು ಅವರು ಟಿವಿಯಿಂದ ಮನೆಗಳಿಗೆ ಬರುತ್ತಾರೆ,’’ ಎಂದು ತಿವಾರಿ ಪ್ರಧಾನಿಯ ಹೆಸರೆತ್ತದೇ ಅವರನ್ನು ಅಣಕಿಸಿದ್ದಾರೆ.
ಮೋದಿ ಸರಕಾರದ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಈಗಾಗಲೇ ಭಾರೀ ಟೀಕೆ ಎದುರಿಸುತ್ತಿದ್ದು ಸ್ವಪಕ್ಷೀಯ ನಾಯಕ ಯಶವಂತ್ ಸಿನ್ಹಾ ಅವರೇ ಇತ್ತೀಚೆಗೆ ಮೋದಿ ಸರಕಾರದ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದ್ದರು.