ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಾಂಕೇತಿಕ ಹಸ್ತಾಂತರ
ಮಂಗಳೂರು, ಡಿ. 26: ಮಂಗಳೂರು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮಂಗಳೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಸರಕಾರಿ ಬಸ್ಸುಗಳಿಗೆ ಕಸದ ಬುಟ್ಟಿ ವಿತರಣೆ ಕಾರ್ಯ ಇಂದು ನಡೆಯಿತು.
ನಗರದ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಂಗಳೂರು ಕೆಎಸ್ಸಾರ್ಟಿಸಿಯ ಸಾರಿಗೆ ನಿಯಂತ್ರಣಾಧಿಕಾರಿ ದೀಪಕ್‌ಕುಮಾರ್ ಅವರಿಗೆ ಸಾಂಕೇತಿಕವಾಗಿ ಬುಟ್ಟಿ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳನ್ನು ಕೆಡಿಸುವುದೂ ಒಂದು ದುಶ್ಚಟವೇ. ಮನೆಯೊಂದಿಗೆ ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಸ್ವ ಅರಿವು ಪ್ರತಿಯೊಬ್ಬರಲ್ಲೂ ಬರಬೇಕು ಎಂದರು.
ಅಲ್ಲಲ್ಲಿ ಕಸ ಬಿಸಾಡುವ, ಉಗುಳುವಂತಹ ದುಶ್ಚಟಗಳನ್ನು ಅಳವಡಿಸಿಕೊಳ್ಳದೆ ಪರಿಸರ ಶುಚಿಯಾಗಿಡುವಲ್ಲಿ ಶ್ರಮಿಸಬೇಕು. ಬಸ್‌ಗಳಲ್ಲಿ ಕಸ ಬಿಸಾಡದೆ ಕಸದ ಬುಟ್ಟಿಗೆ ಹಾಕುವ ಮೂಲಕ ಸ್ವಚ್ಛತೆ ಜಾಗೃತಿ ವುೂಡಬೇಕು ಎಂದವರು ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಗಳೂರು ತಾಲೂಕು ಅಧ್ಯಕ್ಷ ಮಹಾಬಲ ಚೌಟ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕವಿತಾ ಸನಿಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ವಿಜಯಾ ಬ್ಯಾಂಕ್ ಉಪ ಮಹಾಪ್ರಬಂಧಕ ಶ್ರೀಧರ್ ಮೂರ್ತಿ, ಕೆನರಾ ಬ್ಯಾಂಕ್ ಸಹಾಯಕ ಪ್ರಬಂಧಕ ವಸಂತ್ ಶೆಟ್ಟಿ, ವೇದಿಕೆಯ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಕ್ಷೇ. ಧ.ಗ್ರಾ.ಯೋಜನೆಯ ಮಂಗಳೂರು ತಾಲೂಕು ಯೋಜನಾಧಿಕಾರಿ ಉಮರಬ್ಬ ಸ್ವಾಗತಿಸಿದರು.