ಕೇಂದ್ರ ಸರಕಾರದಿಂದ ಕಾರ್ಮಿಕರ ಹಕ್ಕುಗಳಿಗೆ ತಿಲಾಂಜಲಿ: ಡಾ. ಸಿದ್ದನಗೌಡ ಪಾಟೀಲ
ಮಂಗಳೂರು, ಡಿ.26: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಬಡವರುಮತ್ತು ದುಡಿಯುವ ವರ್ಗದ ಜನರ ಹಕ್ಕುಗಳನ್ನು ಕಡೆಗಣಿಸುತ್ತಿರುವುದಲ್ಲದೆ, ಎಲ್ಲ ಕಾರ್ಮಿಕ ಕಾನೂನುಗಳನ್ನೂ ದುರ್ಬಲಗೊಳಿಸಿ, ಕಾರ್ಮಿಕರ ಹಕ್ಕುಗಳಿಗೆ ತಿಲಾಂಜಲಿ ನೀಡುತ್ತಿದೆ ಎಂದು ಸಿಪಿಐ ಹಿರಿಯ ಮುಖಂಡ ಡಾ.ಸಿದ್ದನಗೌಡ ಪಾಟೀಲ ಆಪಾದಿಸಿದ್ದಾರೆ.
ಅವರು ಇಂದು ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಸಿಪಿಐ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಘಟಕದ 23ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಒಂದು ವರ್ಷದ ಹಿಂದೆ ನೋಟು ಅಮಾನ್ಯೀಕರಣಗೊಳಿಸಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದೀಗ ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ (ಎಫ್‌ಆರ್‌ಡಿಐ) ಕಾನೂನು ಜಾರಿಗೊಳಿಸಿ ಬಡವರು ಬ್ಯಾಂಕ್‌ನಲ್ಲಿ ಇರಿಸಿರುವ ಹಣವನ್ನು ಕೊಳ್ಳೆ ಹೊಡೆಯಲು ಮುಂದಾಗಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಸರಕಾರವು ಕಾರ್ಪೋರೇಟ್ ಶಕ್ತಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಫ್‌ಆರ್‌ಡಿಐಗೆ ಸಾರ್ವಜನಿಕರಿಂದ ವಿರೋಧ ವ್ಯಕತಿವಾದಾಗ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಎಫ್‌ಆರ್‌ಡಿಐ ಮಸೂದೆ ಜಾರಿಗೊಳಿಸುವ ಪ್ರಸ್ತಾವವಿಲ್ಲ ಎಂದಿದ್ದಾರೆ. ಆದರೆ, ಈ ಮಸೂದೆಯನ್ನು ಸಂಸತಿತಿನ ಜಂಟಿ ಸಮಿತಿಯ ಮುಂದೆ ಪರಿಶೀಲನೆಗಾಗಿ ಮಂಡಿಸಲಾಗಿದೆ. ಜಾರಿಯಾಗದ ಮಸೂದೆಯನ್ನು ಜಂಟಿ ಸಮಿತಿ ಪರಿಶೀಲನೆಗೆ ಇಟ್ಟಿರುವುದೇಕೆ ಎಂದವರು ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡುವವರೇ. ಕಾಂಗ್ರೆಸ್‌ನವರು ಮನೆಯಲ್ಲಿರುವ ವಸ್ತುಗಳನ್ನು ಕದಿಯುತ್ತಿದ್ದರು. ಆದರೆ, ಬಿಜೆಪಿಯವರು ಮನೆಯನ್ನೇ ಕಳವು ಮಾಡುವಂತಹ ಚಾಣಾಕ್ಷರು ಎಂದು ಸಿದ್ದನಗೌಡ ಪಾಟೀಲ ಹೇಳಿದರು.
ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಕೇಂದ್ರ ಸರ್ಕಾರ, ಜನರ ವಿಶ್ವಾಸ ಕಳೆದುಕೊಂಡಿದೆ. ಜನರನ್ನು ದಾರಿ ತಪ್ಪಿಸಲು ಪ್ರಧಾನಿಯವರು ಪಾಕಿಸ್ತಾನವನ್ನು ತೋರಿಸಿ ಹಿಂದುಸ್ತಾನದಲ್ಲಿ ಕುರ್ಚಿ ಟ್ಟಿ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸಿಪಿಐ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಸಾಥಿ ಸುಂದರೇಶ್ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಗೂ ಮೊದಲು ದೇಶದ ಹಲವು ಕಡೆಗಳಲ್ಲಿ ಕೋಮುಗಲಭೆ ನಡೆಸಲು ಸಂಘ ಪರಿವಾರ ಸಂಚು ನಡೆಸುತ್ತಿರುವ ವರದಿ ಗುಪ್ತಚರ ಇಲಾಖೆ ಮೂಲಗಳಿಂದ ಹರಿದಾಡುತ್ತಿವೆ. ಮಂಗಳೂರಿನಿಂದಲೇ ಈ ಕೆಲಸ ಆರಂಭವಾಗುವ ಆತಂಕವಿದೆ. ಈ ಸಂದರ್ಭದಲ್ಲಿ ದುಡಿಯುವ ವರ್ಗದ ಜನರು ತಮ್ಮ ಮಕ್ಕಳು ಕೋಮು ಶಕ್ತಿಗಳ ಕೈಗೆ ಸಿಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ವಿ.ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಕಾಸರಗೋಡು ಜಿಲ್ಲಾ ಸಹ ಕಾರ್ಯದರ್ಶಿ ಬಿ.ವಿ.ರಾಜನ್, ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಂ ಬಲ್ಲಂಗುಡೇಲ್, ಎಐಟಿಯುಸಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ವಿ.ರಾವ್, ಪಕ್ಷದ ಮುಖಂಡರಾದ ವಿ.ಸೀತಾರಾಮ ಬೇರಿಂಜ, ವಿ.ಶೇಖರ್, ಪಿ.ಸಂಜೀವ, ಸರಸ್ವತಿ ಕಡೇಶಿವಾಲಯ, ಭಾರತಿ ಶಂಭೂರು, ನಾಗೇಶ್ ಕಲ್ಲೂರು, ಕೆ.ವಿ.ಭಟ್ ಮತುತಿ ಎ.ಪಿ.ರಾವ್ ವೇದಿಕೆಯಲ್ಲಿದ್ದರು.
ಗೋಡ್ಸೆ ವಂಶ ನಿಮ್ಮದು: ಅನಂತ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ
ಜಾತ್ಯತೀತರ ತಂದೆ ಭಗತ್ ಸಿಂಗ್. ನಮ್ಮ ರಕ್ತದ ಗುರುತು ಕೇಳುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆಯ ತಂದೆ ನಾಥೂರಾಮ್ ಗೋಡ್ಸೆ ಎಂದು ಸಿಪಿಐ ಹಿರಿಯ ಮುಖಂಡ ಡಾ.ಸಿದ್ದನಗೌಡ ಪಾಟೀಲ ಹರಿಹಾಯ್ದರು.
ಜಾತ್ಯತೀತರ ಅಪ್ಪ, ಅಮ್ಮ ಯಾರು? ಎಂದು ಅವರು ಪ್ರಶ್ನಿಸಿದ್ದಾರೆ. ಜಾತ್ಯತೀತ ತತ್ವದಲ್ಲಿ ಅಚಲ ನಂಬಿಕೆ ಹೊಂದಿರುವ ಎಡ ಪಕ್ಷಗಳ ಸದಸ್ಯರಿಗೆ ಬುದ್ಧ, ಬಸವಣ್ಣ ತಾತಂದಿರು. ಭಗತ್ ಸಿಂಗ್ ತಂದೆ, ಗಾಂಧಿ ದೊಡ್ಡಪ್ಪ, ಅಂಬೇಡ್ಕರ್ ಚಿಕ್ಕಪ್ಪ, ಪೆರಿಯಾರ್, ನಾರಾಯಣ ಗುರುಗಳು, ಶಿಶುನಾಳ ಶರೀಫ ಬಂಧುಗಳು ಎಂದರು.
‘‘ಎಡಪಕ್ಷಗಳ ಲಕ್ಷಾಂತರ ಮಂದಿ ಕಾರ್ಯಕರ್ತರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಒಬ್ಬನೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೂ ಇಲ್ಲದ ಪಕ್ಷ ಬಿಜೆಪಿ. ದೇಶದಲ್ಲಿ ಮೊಟ್ಟಮೊದಲ ರಾಜಕೀಯ ಕೊಲೆ ನಡೆಸಿದ ಗೋಡ್ಸೆ ವಂಶ ನಿಮ್ಮದು. ಸ್ವಾತಂತ್ರ್ಯ ಹೋರಾಟ ಮಾಡಿದ್ದು ತಪ್ಪು ಎಂದು ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟ ಸಾರ್ವಕರ್ ವಂಶಸ್ಥರು ನೀವು’’ ಎಂದು ಸಿದ್ದನಗೌಡ ಪಾಟೀಲ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.