ಶಿಕ್ಷಣ ಸಾಲದಲ್ಲಿ ವಂಚನೆ: ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು
ಉಡುಪಿ, ಡಿ.26: ಶಿಕ್ಷಣ ಸಾಲ ಪಡೆದ ಎಂಬಿಎ ವಿದ್ಯಾರ್ಥಿನಿಯ ಉಳಿತಾಯ ಬ್ಯಾಂಕ್ ಖಾತೆಯಿಂದ ವಿಮಾ ಕಂತಿನ ಹಣ ಪಡೆದು ವಂಚಿಸಿರುವ ಬಗ್ಗೆ ಕಳೆದ ಆರು ವರ್ಷಗಳಿಂದ ಸಮರ್ಪಕ ಉತ್ತರ ನೀಡದ ಸಿಂಡಿಕೇಟ್ ಬ್ಯಾಂಕ್ ವಿರುದ್ಧ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದೆ.
ಉಡುಪಿ ಕುಂಜಿಬೆಟ್ಟು ಕಾನೂನು ವಿದ್ಯಾಲಯದಲ್ಲಿ ಡಿ. 26ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಸಿಂಡಿಕೇಟ್ ಬ್ಯಾಂಕ್ ಅವಾಂತರವನ್ನು ಬಹಿರಂಗ ಪಡಿಸಿದರು.
ಮುಲ್ಕಿಯ ಡಾ.ಅರವಿಂದ ಜೋಶಿ ತನ್ನ ಮಗಳು ಮೈತ್ರೇಯಿ ಎಂಬವರ ಎಂಬಿಎ ಉನ್ನತ ಶಿಕ್ಷಣಕ್ಕಾಗಿ ಕಾಲೇಜಿ ನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 2009ರ ಜೂನ್ ತಿಂಗಳಲ್ಲಿ ವಿದ್ಯಾ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಾಲ ಮಂಜೂರಾದ ಬಳಿಕ ಅದರ ಎಲ್ಲ ವ್ಯವಹಾರಗಳನ್ನು ಅರವಿಂದ ಜೋಶಿಯೇ ನೋಡಿಕೊಳ್ಳುತ್ತಿದ್ದರು. ಅವರು ಈ ಸಾಲಕ್ಕಾಗಿ ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪನಿಯಲ್ಲಿ ಬ್ಯಾಂಕ್ ಮೂಲಕ ವಿಮೆ ಕೂಡ ಮಾಡಿಸಿದ್ದರು. ಆದರೆ ತಂದೆ ಎಷ್ಟು ಸಾಲ ಪಡೆದಿದ್ದರೆಂಬ ಮಾಹಿತಿ ಮೈತ್ರೇಯಿಗೆ ತಿಳಿದಿರಲಿಲ್ಲ.
ಮೈತ್ರೇಯಿಯ ಕೋರ್ಸ್ ಕೊನೆಯ ಹಂತದಲ್ಲಿರುವ 2011ರ ಮಾರ್ಚ್ ತಿಂಗಳಲ್ಲಿ ನಡೆದ ಅಪಘಾತದಲ್ಲಿ ಡಾ. ಅರವಿಂದ ಜೋಶಿ ಮೃತಪಟ್ಟರು. ಬಳಿಕ ಆಕೆ ಶಿಕ್ಷಣ ಸಾಲದ ಮರುಪಾವತಿಗಾಗಿ ತಂದೆ ಮಾಡಿರುವ ವಿಮೆಯ ಪಾಲಿಸಿ ಹುಡುಕಿದರೂ ಆಕೆಗೆ ಸಿಗಲಿಲ್ಲ. ನಂತರ ಅವರು ಬ್ಯಾಂಕಿನ ಮುಲ್ಕಿ ಶಾಖೆಯ ಮ್ಯಾನೇಜರ್ ರನ್ನು ಸಂಪರ್ಕಿಸಿ ತನ್ನ ಶಿಕ್ಷಣ ಸಾಲದ ವಿವರ, ವಿಮಾ ಪಾಲಿಸಿ, ಅದನ್ನು ಮಂಜೂರು ಮಾಡುವ ಕುರಿತ ಮಾಹಿತಿಯನ್ನು ಕೇಳಿದರು. ಆದರೆ ಇದಕ್ಕೆ ವರ್ಷ ಕಳೆದರೂ ಬ್ಯಾಂಕಿನಿಂದ ಯಾವುದೇ ಉತ್ತರ ಬರಲಿಲ್ಲ.
ಸಾಲ ವಸೂಲಿ ನೋಟೀಸ್: 2012ರ ಸೆ.20ರಂದು ಮೈತ್ರೇಯಿಗೆ ನೋಟಿಸ್ ಕಳುಹಿಸಿದ ಬ್ಯಾಂಕ್ ತಮ್ಮ ಹೆಸರಿನಲ್ಲಿದ್ದ ಸಾಲದ ಮೊತ್ತ 6,05,676 ರೂ.ಗಳಾಗಿದ್ದು, ಈಗಾಗಲೇ ಬಾಕಿ ಕಂತು 23,800 ರೂ.ವನ್ನು ಕೂಡಲೇ ಪಾವತಿಸುವಂತೆ ಸೂಚಿಸಿತ್ತು. ಅದಕ್ಕೆ ಮೈತ್ರೇಯಿ ಅಧಿಕಾರಿಗೆ ಪತ್ರ ಬರೆದು ಈಗಾಗಲೇ ಕೇಳಿರುವ ಸಾಲದ ಹಾಗೂ ವಿಮೆಯ ವಿವರಗಳನ್ನು ನೀಡುವಂತೆ ತಿಳಿಸಿದರು.
ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್ ಮೈತ್ರೇಯಿಗೆ 13 ನೋಟಿಸುಗಳನ್ನು ಕಳುಹಿಸಿದ್ದು, ಒಂದರಲ್ಲಿಯೂ ಅವರು ಕೇಳಿದ ಮಾಹಿತಿಗಳ ವಿವರವನ್ನು ನೀಡಲಿಲ್ಲ. ಇತ್ತೀಚಿಗೆ ಬಂದ ನೋಟಿಸ್‌ನಲ್ಲಿ ಸಾಲದ ಮೊತ್ತ 12,37,338 ರೂ. ತಲುಪಿರುವುದಾಗಿ ತಿಳಿಸಲಾಗಿತ್ತು. ಈ ಹೆಚ್ಚಿನ ಬ್ಯಾಂಕ್ ನೋಟಿಸ್ ಗಳಲ್ಲಿ ಕಳುಹಿಸಿದವರ ಸಹಿ ಮತ್ತು ಬ್ಯಾಂಕಿನ ರಬ್ಬರ್ ಸ್ಟ್ಯಾಂಪ್ ಇಲ್ಲವೇ ಇಲ್ಲ ಎಂದು ಅವರು ದೂರಿದರು.
ಪ್ರತಿಷ್ಠಾನಕ್ಕೆ ದೂರು: ಮೈತ್ರೇಯಿ 2014ರ ಡಿಸೆಂಬರ್‌ನಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ಮಾರ್ಗದರ್ಶನ ಯಾಚಿಸಿದರು. ಪ್ರತಿಷ್ಠಾನ ಶಾಖಾಧಿಕಾರಿಯಿಂದ ಹಿಡಿದು ಮಹಾಪ್ರಬಂಧಕರ ವರೆಗೆ ಎಲ್ಲ ಅಧಿಕಾರಿಗಳಿಗೆ ಪತ್ರ ಬರೆದು ವಿಚಾರಿಸಿತು. ಆದರೆ ಯಾವುದೇ ಅಧಿಕಾರಿಯೂ ಸಾಲ ಪ್ರಕರಣದ ವಿವರಗಳನ್ನು ಮೈತ್ರೇಯಿಗೆ ನೀಡದ ಬಗ್ಗೆ ತಿಳಿಸಿಲ್ಲ ಎಂದು ಡಾ. ಶಾನುಭಾಗ್ ಹೇಳಿದರು.
ಮೈತ್ರೇಯಿಯ ಸಾಲದ ಖಾತೆಯ ಸ್ಟೇಟ್‌ಮೆಂಟ್ ಪಡೆದು ಪರಿಶೀಲಿಸಿ ದಾಗ 2009ರ ಜೂನ್ ತಿಂಗಳಿನಲ್ಲಿ ಬ್ಯಾಂಕ್ ಸಾಲ ಮೊದಲನೆ ಕಂತನ್ನು ಬಿಡುಗಡೆ ಮಾಡಿದ್ದು, ಜುಲೈ ತಿಂಗಳಿನಲ್ಲಿ ವಿಮೆಯ ಪ್ರೀಮಿಯಂಗಾಗಿ 4350 ರೂ.ವನ್ನು ಆಕೆಯ ಖಾತೆಯಿಂದ ತೆಗೆದಿರುವುದು ತಿಳಿದುಬಂತು. ಈ ಬಗ್ಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯನ್ನು ಸಂಪರ್ಕಿಸಿದಾಗ ಮೈತ್ರೇಯಿ ಅಥವಾ ಆಕೆಯ ತಂದೆಯ ಹೆಸರಿನಲ್ಲಿ ಬ್ಯಾಂಕ್ ಯಾವುದೇ ವಿಮಾ ಪಾಲಿಸಿಯನ್ನು ಮಾಡಿಲ್ಲ ಎಂಬುದಾಗಿ ತಿಳಿಸಿತು. ಹಾಗಾದರೆ ಖಾತೆಯಿಂದ ತೆಗೆದ ಪ್ರೀಮಿಯಂ ಹಣ ಏನಾಯಿತು ಎಂಬುದು ಮುಖ್ಯ ಪ್ರಶ್ನೆ ಎಂದು ಅವರು ಹೇಳಿದರು.
ಮೈತ್ರೆಯಿ ಹಾಗೂ ಪ್ರತಿಷ್ಠಾನಕ್ಕೆ ಉತ್ತರ ನೀಡದ ಬ್ಯಾಂಕ್ ಅಧಿಕಾರಿಗಳ ವಿರುದ್ಧ 2016ರಲ್ಲಿ ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಲಾಯಿತು. ಇದರ ಪರಿಣಾಮ ಲೋಕ ಅದಾಲತ್ ರಚಿಸಲಾಯಿತು. ಪ್ರಾಧಿಕಾರದಿಂದ ನೋಟೀಸ್ ಪಡೆದ ಮೈತ್ರೇಯಿ ಲಿಖಿತ ಉತ್ತರ ನೀಡಿದರು.
ಸಾಲ ವಸೂಲಿಗೆ ಕೀಳು ಮಟ್ಟಕ್ಕೆ ಇಳಿದ ಬ್ಯಾಂಕ್, ಬೇರೆ ವ್ಯಕ್ತಿಗಳ ಮೂಲಕ ಮನೆಯಲ್ಲಿ ಒಂಟಿಯಾಗಿರುವ ಮೈತ್ರೇಯಿಯ ತಾಯಿಗೆ ಸಾಲ ತೀರಿಸುವಂತೆ ಬೆದರಿಕೆ ಹಾಕಿಸಿತು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮಾಧ್ಯಮದ ಮುಂದೆ ಬಹಿರಂಗಗೊಳಿಸಲು ಪ್ರತಿಷ್ಠಾನವು ನಿರ್ಧರಿಸಿತು. ಪ್ರತಿಷ್ಠಾನಕ್ಕೆ ಈಗಾಗಲೇ ಇಂತಹ ಇನ್ನೂ ಅನೇಕ ಪ್ರಕರಣಗಳು ಬಂದಿದ್ದು ಅವುಗಳ ಬಗ್ಗೆಯೂ ಮಾಹಿತಿ ಕಳೆಹಾಕಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಸಂರ್ಭದಲ್ಲಿ ಮೈತ್ರೇಯಿ ಹಾಜರಿದ್ದರು.