×
Ad

ಟಾರ್ಚ್ ಬೆಳಕಿನಲ್ಲಿ 32 ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ !

Update: 2017-12-26 20:38 IST

ನವಾಬ್‌ಗಂಜ್ (ಉ.ಪ್ರ) ಡಿ.26: ಸೋಮವಾರ ರಾತ್ರಿ ಉತ್ತರ ಪ್ರದೇಶದ ನವಾಬ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಟಾರ್ಚ್ ಬೆಳಕಿನ ಸಹಾಯದಿಂದ 32 ರೋಗಿಗಳ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು ಇದಕ್ಕೆ ಸಂಬಂಧಪಟ್ಟಂತೆ ಮುಖ್ಯ ವೈದ್ಯಕೀಯ ಅಧಿಕಾರಿ ರಾಜೇಂದ್ರ ಪ್ರಸಾದ್ ಎಂಬವರನ್ನ್ನು ಅಮಾನತುಗೊಳಿಸಲಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಮುಖ್ಯ ವೈದ್ಯಕೀಯ ಅಧಿಕಾರಿಯನ್ನು ಅಮಾನತುಗೊಳಿಸಿದ್ದು ಸಮುದಾಯ ಆರೋಗ್ಯ ಕೇಂದ್ರದ ಮೇಲ್ವಿಚಾರಕರನ್ನು ಕೂಡಾ ವಜಾ ಮಾಡಲಾಗಿದೆ. ಈ ಘಟನೆಯ ಬಗ್ಗೆ ವರದಿ ನೀಡುವಂತೆ ರಾಜ್ಯ ಆರೋಗ್ಯ ಇಲಾಖೆಯು ಆಗ್ರಹಿಸಿದೆ ಎಂದು ರಾಜ್ಯ ಆರೋಗ್ಯ ಸಚಿವ ಸಿದ್ದಾರ್ಥ್‌ನಾಥ್ ಸಿಂಗ್ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ರೋಗಿಗಳಿಗೆ ಮಲಗಲು ಹಾಸಿಗೆಗಳನ್ನು ನೀಡಿಲ್ಲ ಮತ್ತು ತೀವ್ರ ಚಳಿಯಿದ್ದರೂ ರೋಗಿಗಳು ನೆಲದ ಮೇಲೆಯೇ ಮಲಗುವಂತೆ ಮಾಡಲಾಗಿತ್ತು ಎಂದು ಕೆಲವು ರೋಗಿಗಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ವೈದ್ಯಕೀಯ ನಿರ್ಲಕ್ಷಕ್ಕೆ ಸಂಬಂಧಿಸಿದ ಘಟನೆಗಳು ನಡೆಯುತ್ತಲೇ ಇದ್ದು ಕೆಲವು ತಿಂಗಳ ಹಿಂದಷ್ಟೇ ಗೋರಖ್‌ಪುರದ ಸರಕಾರಿ ಆಸ್ಪತ್ರೆಯಲ್ಲಿ 60ಕ್ಕೂ ಅಧಿಕ ಶಿಶುಗಳು ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. 2017ರ ಜುಲೈ 20 ಮತ್ತು ಆಗಸ್ಟ್ 21ರ ಮಧ್ಯೆ ಫಾರೂಕಾಬಾದ್‌ನ ಆಸ್ಪತ್ರೆಯಲ್ಲಿ ಶಿಶು ತೀವ್ರನಿಗಾ ಘಟಕದಲ್ಲಿ 30 ಮಕ್ಕಳು ಮತ್ತು ಹೆರಿಗೆಯ ವೇಳೆ 19 ಮಕ್ಕಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News