ಚೀನಾದ ಕೃತಕ ಸರೋವರದಿಂದ ಅರುಣಾಚಲ, ಅಸ್ಸಾಂ ಜನರಿಗೆ ಆತಂಕ
ಪಣಜಿ, ಡಿ. 26: ಕಳೆದ ತಿಂಗಳು ಸಂಭವಿಸಿದ್ದ ಭೂಕಂಪನದ ಹಿನ್ನೆಲೆಯಲ್ಲಿ ಚೀನಾದ ಟಿಬೆಟ್ ವಲಯದಲ್ಲಿ ಯಾರ್ಲುಂಗ್ ತ್ಸಾಂಗ್‌ಪೊ ನದಿಯಲ್ಲಿ ಮೂರು ಕೃತಕ ಸರೋವರಗಳು ನಿರ್ಮಾಣ ಆಗಿದೆ. ಇದರಿಂದ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿರುವ ಲಕ್ಷಾಂತರ ಜನರಿಗೆ ಭೀತಿಯಿದೆ ಎಂದು ತಜ್ಞರು ಹೇಳಿದ್ದಾರೆ.
ದಕ್ಷಿಣ ಚೀನಾದ ನ್ಯಿಂಗ್ಚಿಯಲ್ಲಿ ನವೆಂಬರ್ 17ರಂದು ಸಂಭವಿಸಿದ 6.4 ತೀವ್ರತೆಯ ಭೂಕಂಪದಿಂದಾಗಿ ಭೂಕುಸಿತ ಉಂಟಾಗಿ ಈ ಸರೋವರಗಳು ರಚನೆಯಾಗಿದೆ. ಈ ಸರೋವರದ ಗಾತ್ರ ಹಾಗೂ ಅದರಲ್ಲಿರುವ ನೀರಿನ ಪ್ರಮಾಣ ಇದುವರೆಗೆ ಖಚಿತವಾಗಿಲ್ಲ.
ಯಾರ್ಲುಂಗ್ ತ್ಸಾಂಗ್‌ಪೊ ನದಿಯನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಎಂದು ಕರೆಯಲಾಗುತ್ತದೆ. ಲೋಹಿತ್ ಸೇರಿದ ಬಳಿಕ ಇದನ್ನು ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ. ಚೀನಾದ ಕೃತಕ ಸರೋವರ ಸೇರಿದರೆ ಅಥವಾ ಸ್ಫೋಟಗೊಂಡರೆ, ಸಿಯಾಂಗ್ ಹಾಗೂ ಬ್ರಹ್ಮಪುತ್ರ ಕೆಳಹರಿವು ದಂಡೆಯಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ತೊಂದರೆ ಆಗಲಿದೆ.
ಈ ಸರೋವರಗಳು ಇದ್ದಕ್ಕಿದ್ದಂತೆ ಒಡೆದರೆ, ದೊಡ್ಡ ಮಟ್ಟದಲ್ಲಿ ವಿನಾಶ ಸಂಭವಿಸಲಿದೆ. ಭಾರತ ಸರಕಾರ ಈ ವಿಷಯವನ್ನು ಚೀನಾದ ಗಮನಕ್ಕೆ ತರಬೇಕಿದೆ ಹಾಗೂ ಇಂತಹ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಜಲತಜ್ಞ ದುಲಾಲ್ ಗೋಸ್ವಾಮಿ ಅಭಿಪ್ರಾಯಿಸಿದ್ದಾರೆ.