10 ದೇಶಗಳು ಸಂಪರ್ಕದಲ್ಲಿ: ಇಸ್ರೇಲ್
ಜೆರುಸಲೇಮ್, ಡಿ. 26: ಅಮೆರಿಕವು ಜೆರುಸಲೇಮನ್ನು ಇಸ್ರೇಲ್‌ನ ರಾಜಧಾನಿಯಾಗಿ ಮಾನ್ಯ ಮಾಡಿದ ಬಳಿಕ, ತಮ್ಮ ರಾಯಭಾರ ಕಚೇರಿಗಳನ್ನು ಈ ನಗರಕ್ಕೆ ಸ್ಥಳಾಂತರಿಸುವ ವಿಷಯದಲ್ಲಿ ಕನಿಷ್ಠ 10 ದೇಶಗಳು ಇಸ್ರೇಲ್‌ನೊಂದಿಗೆ ಸಂಪರ್ಕದಲ್ಲಿವೆ ಎಂದು ಸಹಾಯಕ ವಿದೇಶ ಸಚಿವೆ ಟಿಝಿಪಿ ಹೊಟೊವಲಿ ಸೋಮವಾರ ಸರಕಾರಿ ರೇಡಿಯೊಗೆ ತಿಳಿಸಿದ್ದಾರೆ.
‘‘ಕನಿಷ್ಠ 10 ದೇಶಗಳು ನಮ್ಮೊಂದಿಗೆ ಸಂಪರ್ಕದಲ್ಲಿವೆ. ಅವುಗಳ ಪೈಕಿ ಕೆಲವು ದೇಶಗಳು ಯುರೋಪ್‌ನವು’’ ಎಂದು ಸಚಿವೆ ಹೇಳಿದರು.
ತನ್ನ ರಾಯಭಾರ ಕಚೇರಿಯನ್ನು ಜೆರುಸಲೇಮ್‌ಗೆ ಸ್ಥಳಾಂತರಿಸುವುದಾಗಿ ಗ್ವಾಟೆಮಾಲ ಘೋಷಿಸಿದ ಒಂದು ದಿನದ ಬಳಿಕ ಅವರು ಈ ವಿಷಯ ತಿಳಿಸಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೇಳಿಕೆಯು, ಇಂಥ ಹಲವಾರು ನಿರ್ಧಾರಗಳಿಗೆ ಕಾರಣವಾಗುತ್ತದೆ ಎಂದರು.
ಇಸ್ರೇಲ್‌ನೊಂದಿಗೆ ಸಂಪರ್ಕದಲ್ಲಿರುವ ದೇಶಗಳು ಯಾವುವು ಎಂಬುದನ್ನು ಸಚಿವೆ ಬಹಿರಂಗಡಿಸಿಲ್ಲ. ಆದರೆ, ಹೊಂಡುರಸ್, ಫಿಲಿಪ್ಪೀನ್ಸ್, ರೊಮೇನಿಯ ಮತ್ತು ದಕ್ಷಿಣ ಸುಡಾನ್ ಮುಂತಾದ ದೇಶಗಳು ಈ ಪಟ್ಟಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.