ಎಂ.ಫ್ರೆಂಡ್ಸ್ 'ಕಾರುಣ್ಯ' ಯೋಜನೆಗೆ ಜುಬೈಲ್ ಸ್ಯಾಂಡ್ ಟೆಕ್ ಸಂಸ್ಥೆಯಿಂದ ಕೊಡುಗೆ
ಮಂಗಳೂರು, ಡಿ. 26: ಮಂಗಳೂರು ಎಂ. ಫ್ರೆಂಡ್ಸ್ ವತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾದ 'ಕಾರುಣ್ಯ' ಯೋಜನೆಗೆ ಸೌದಿ ಅರೇಬಿಯಾದ ಜುಬೈಲ್ ನ ಉದ್ಯಮ ಸಂಸ್ಥೆ 'ಸ್ಯಾಂಡ್ ಟೆಕ್' ಒಂದು ತಿಂಗಳ ಆಹಾರವನ್ನು ಉಚಿತವಾಗಿ ಒದಗಿಸಲು ತೀರ್ಮಾನಿಸಿದೆ.
ಸ್ಯಾಂಡ್ ಟೆಕ್ ಪಾಲುದಾರರಾದ ಯೂನುಸ್ ಹಸನ್ ಫಳ್ನೀರ್, ತಾಹಿರ್ ಸಾಲ್ಮರ, ನಝೀರ್ ಕೂಳೂರು ಅವರು ಇದರ ವೆಚ್ಚ ಭರಿಸಲಿದ್ದಾರೆ. ಇದಲ್ಲದೆ ಯೂನುಸ್ ಹಸನ್ ಅವರು ವೈಯಕ್ತಿಕವಾಗಿಯೂ 15 ದಿವಸದ ಆಹಾರ ಒದಗಿಸಲು ತೀರ್ಮಾನಿಸಿದ್ದಾರೆ.
ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿರುವ ರೋಗಿಗಳ ಜೊತೆಗಾರರಿಗೆ ದಿನನಿತ್ಯ ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಯಡಿ ರಾತ್ರಿ ಚಪಾತಿ, ತರಕಾರಿ ಪದಾರ್ಥವನ್ನೊಳಗೊಂಡ ಭೋಜನ ನೀಡುತ್ತಿದೆ. ಪ್ರತಿನಿತ್ಯ 7,500/- ರೂ. ಖರ್ಚಾಗುತ್ತಿದ್ದು, ಮಾಸಿಕ 2,25,000/- ರೂ. ವ್ಯಯಿಸುತ್ತಿದೆ.
ವೆನ್ಲಾಕ್ ಗೆ ರಾಜ್ಯದ ನಾನಾ ಭಾಗಗಳ ರೋಗಿಗಳು ಇಲ್ಲಿ ದಾಖಲಾಗುತ್ತಿದ್ದು, ಅವರಿಗೆ ಸರಕಾರ ಅನ್ನಾಹಾರ ನೀಡುತ್ತಿದೆ. ಆದರೆ ಬಡ ರೋಗಿಗಳ ಜೊತೆಗಾರರು ರೋಗಿಯ ಅನ್ನವನ್ನೇ ಪಾಲು ಮಾಡಿ ತಿನ್ನುವುದು ಅಥವಾ ಉಪವಾಸದಿಂದ ಇರುವುದನ್ನು ಮನಗಂಡ ಎಂ.ಫ್ರೆಂಡ್ಸ್ ಸಂಸ್ಥೆ ರಾತ್ರಿ ಚಪಾತಿ, ತರಕಾರಿ ಪದಾರ್ಥ ವಿತರಿಸುತ್ತಿದೆ.