ಪಡುಬಿದ್ರೆ: ಒಂದು ಲಕ್ಷ ಯೂನಿಟ್ ರಕ್ತ ಸಂಗ್ರಹಣೆಯ ಗುರಿ- ಜಿ.ಶಂಕರ್
ಪಡುಬಿದ್ರೆ, ಡಿ. 27: ಎಲ್ಲಾ ಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ಒಂದು ಲಕ್ಷ ಯೂನಿಟ್ ರಕ್ತ ಸಂಗ್ರಹಣೆಯ ಗುರಿ ಹೊಂದಲಾಗಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮುಖ್ಯ ಪ್ರವರ್ತಕರಾದ ಜಿ.ಶಂಕರ್ ಹೇಳಿದರು.
ಪಡುಬಿದ್ರೆ ಬೀಚ್‌ನಲ್ಲಿ ಬುಧವಾರ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಉಡುಪಿ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲ್ ಟ್ರಸ್ಟ್, ಮಂಗಳೂರು ರೋಟರಿ ಕ್ಲಬ್, ಪಡುಬಿದ್ರೆ ಕರಾವಳಿ ಫ್ರೆಂಡ್ಸ್ ಹಾಗೂ ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ರಕ್ತದಾನ ಜಾಗೃತಿ ಮೂಡಿಸುವ ಸಲುವಾಗಿ "ರಕ್ತದಾನ ರಥ ಸಂಚಾರ"ವನ್ನು ಉದ್ಘಾಟಿಸಿ ಮಾತನಾಡಿ, ಈಗಾಗಲೇ ನಮ್ಮ ಗುರಿ ತಲುಪುವ ಹಂತದಲ್ಲಿದ್ದೇವೆ. 800 ಯೂನಿಟ್ ರಕ್ತಗಳ ಅವಶ್ಯಕತೆಯಿದ್ದು, ಮುಂದಿನ ಹತ್ತು ದಿನದೊಳಗೆ ಒಂದು ಲಕ್ಷ ಯೂನಿಟ್ ರಕ್ತ ಸಂಗ್ರಹವಾಗಲಿದೆ ಎಂದು ಜಿ.ಶಂಕರ್ ನುಡಿದರು.
ಮಂಗಳೂರು ರೋಟರಿ ಸಂಸ್ಥೆ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ರಕ್ತದಾನ ಶಿಬಿರಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದೆ. ಬಸ್ಸಿನಲ್ಲಿ ಒಂದೇ ಸಮಯದಲ್ಲಿ ನಾಲ್ಕು ಮಂದಿ ರಕ್ತದಾನ ಮಾಡಲು ಅವಕಾಶವಿದೆ. ರಕ್ತದಾನ ರಥವು ಜಿಲ್ಲೆಯಾದ್ಯಂತ ಗ್ರಾಮೀಣ ಭಾಗಗಳಲ್ಲಿ ಸಂಚರಿಸಲಿದೆ. ರಕ್ತದಾನದ ಬಗ್ಗೆ ಯುವ ಜನತೆಗೆ ಜಾಗೃತಿ ಮೂಡಿಸಲು ಪರಿಣಾಮಕಾರೀ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಎಲ್ಲಾ ರಕ್ತಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಗುವುದು. ಮುಂದಿನ ದಿನಗಳಲ್ಲೂ ಸಂಘಟನೆಯು ನಿರಂತರ ರಕ್ತದಾನ ಹಾಗೂ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಲಿದೆ. ಗ್ರಾಮೀಣ ಭಾಗದ ಯುವ ಜನರನ್ನೂ ಒಗ್ಗೂಡಿಸಿ ರಕ್ತದಾನಕ್ಕೆ ಪ್ರೇರೇಪಿಸಲು ಮೊಗವೀರ ಯುವ ಸಂಘಟನೆ ಪರಿಣಾಮಕಾರೀ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಬುಧವಾರ ಮಂಗಳೂರು ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಯತೀಶ್ ಬೈಕಂಪಾಡಿ ಮತ್ತು ಮೊಗವೀರ ಯುವ ಸಂಘಟನೆಯ ಪೂರ್ವಾಧ್ಯಕ್ಷ ಎಮ್.ಎಸ್.ಸಂಜೀವ ರಕ್ತದಾನ ಮಾಡುವ ಮೂಲಕ ರಕ್ತದಾನಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭ ಪಡುಬಿದ್ರೆ ಕರಾವಳಿ ಫ್ರೆಂಡ್ಸ್‌ನ ಸುಮಾರು 30 ಸದಸ್ಯರು ರಕ್ತದಾನ ಮಾಡಿದರು.
ಈ ಸಂದರ್ಭ ಜಿಪಂ ಸದಸ್ಯ ಹಾಗೂ ಕರಾವಳಿ ಫ್ರೆಂಡ್ಸ್ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಬಜರಂಗದಳ ಕಾಪು ಪ್ರಕೋಷ್ಠದ ಸಂಚಾಲಕ ರಾಜೇಶ್ ಕೋಟ್ಯಾನ್ ಪಡುಬಿದ್ರೆ, ರೆಡ್‌ಕ್ರಾಸ್ ಸಂಸ್ಥೆಯ ಎಡ್ವರ್ಡ್ ವಾಸ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ್ ಕಾಂಚನ್, ವಿನಯ ಕರ್ಕೇರ, ಜೀವನ್ ಪಡುಬಿದ್ರೆ, ವಿನಾಯಕ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.