ಕೇಂದ್ರ ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯ: ಆಲಿ ಹಸನ್
Update: 2017-12-27 19:54 IST
ಮಂಗಳೂರು, ಡಿ.27: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ತನ್ನ ಸ್ಥಾನ ಮತ್ತು ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಮಾತನಾಡುತ್ತಾ ಬಂದಿದ್ದರೂ ಕೂಡ ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಮೌನ ತಾಳಿರುವುದು ಖಂಡನೀಯ. ಹಾಗಾಗಿ ರಾಷ್ಟ್ರಪತಿ ಮಧ್ಯಪ್ರವೇಶಿಸಿ ಕಠಿಣ ಕ್ರಮ ಜರಗಿಸ ಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಆಲಿ ಹಸನ್ ಒತ್ತಾಯಿಸಿದ್ದಾರೆ.
ಸಂವಿಧಾನಕ್ಕೆ ಬದ್ಧರಾಗಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿ ಸಂಸದ, ಸಚಿವರಾಗಿರುವ ಅನಂತ ಕುಮಾರ್ ಹೆಗಡೆ ಇದೀಗ ಸಂವಿಧಾನವನ್ನು ಬದಲಾಯಿ ಸಲು ಬಂದಿರುವುದಾಗಿ ಮಾತನಾಡುತ್ತಿರುವುದು ಅವರ ಅವಿವೇಕತನಕ್ಕೆ ಸಾಕ್ಷಿಯಾಗಿದೆ. ಧರ್ಮ ಒಡೆಯುವ ಕೆಲಸ ಮಾಡುವ ಅನಂತ ಕುಮಾರ್ ಹೆಗಡೆಯ ವಿರುದ್ಧ ಕ್ರಮ ಜರಗಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಪ್ರಧಾನಿ ಹಿಂದೇಟು ಹಾಕುವ ಕಾರಣ ಸ್ವತ: ಅವರೇ ಈ ಸಚಿವರ ಮೂಲಕ ಹೇಳಿಕೆ ನೀಡಿಸುತ್ತಿರುವ ಶಂಕೆ ಇದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.