ಮಂಗಳೂರು: ರಿಕ್ಷಾ ಚಾಲಕನ ಕೊಲೆಯತ್ನ; ದುಷ್ಕರ್ಮಿಗಳ ಗುರುತು ಪತ್ತೆ
ಮಂಗಳೂರು, ಡಿ. 27: ರಾ.ಹೆ. 66ರ ಜಪ್ಪಿನಮೊಗರು ಸಮೀಪ ರಿಕ್ಷಾ ಚಾಲಕನೊಬ್ಬನನ್ನು ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಉಳ್ಳಾಲ ಅಳೇಕಲ ನಿವಾಸಿ ಮುಹಮ್ಮದ್ ಶಾಕಿರ್ (35) ತಲವಾರು ದಾಳಿಗೊಳಗಾದ ರಿಕ್ಷಾ ಚಾಲಕ ಎಂದು ಗುರುತಿಸಲಾಗಿದೆ. ಅವರನ್ನು ಸರಿಪಳ್ಳ ನಿವಾಸಿಗಳಾದ ಭವಿತ್ ರಾಜ್ ಮತ್ತು ವೆಂಕಟೇಶ್ ಎಂಬವರು ಕೊಲೆಗೆ ಯುತ್ನಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.
ಮುಹಮ್ಮದ್ ಶಾಕಿರ್ ಮಂಗಳವಾರ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಬಿ.ಸಿ.ರೋಡ್‌ನಿಂದ ಪಂಪ್‌ವೆಲ್ ಮೂಲಕ ಉಳ್ಳಾಲದಲ್ಲಿರುವ ತನ್ನ ಮನೆಗೆ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಕಾರೊಂದರಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆಗೈದಿದ್ದು, ಇದರಿಂದ ರಿಕ್ಷಾ ಚಾಲಕ ಮುಹಮ್ಮದ್ ಶಾಕಿರ್‌ರ ಮುಖ ಮತ್ತು ಬಲಗಣ್ಣಿಗೆ ಗಂಭೀರ ಗಾಯವಾಗಿದೆ. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಮುಹಮ್ಮದ್ ಶಾಕಿರ್ ಮಂಗಳೂರಿನಲ್ಲಿ ರಿಕ್ಷಾವನ್ನು ಬಾಡಿಗೆಗೆ ಓಡಿಸುತ್ತಿದ್ದು, ಮಂಗಳವಾರ ರಾತ್ರಿ ಬಿ.ಸಿ.ರೋಡ್‌ಗೆ ಬಾಡಿಗೆಗೆ ಹೋಗಿದ್ದ ಅವರು ಮರಳಿ ಬರುವಾಗ ಈ ಕೃತ್ಯ ಸಂಭವಿಸಿದೆ ಎಂದು ತಿಳಿದು ಬಂದಿದೆ.
‘ಮುಹಮ್ಮದ್ ಶಾಕಿರ್ ಪ್ರತೀ ದಿನ ಸುಮಾರು 9 ಅಥವಾ 10 ಗಂಟೆಗೆ ಮನೆಗೆ ಸೇರುತ್ತಾರೆ. ಮಂಗಳವಾರ ರಾತ್ರಿ ಬಿ.ಸಿ.ರೋಡ್‌ಗೆ ಬಾಡಿಗೆಗೆ ತೆರಳಿದ್ದ ಕಾರಣ ಮನೆಗೆ ಮರಳುವಾಗ ತಡವಾಗಿತ್ತು. ಶಾಕಿರ್ ಚಲಾಯಿಸುತ್ತಿದ್ದ ರಿಕ್ಷಾವನ್ನು ಜಪ್ಪಿನಮೊಗರು ಬಳಿ ಕಾರೊಂದು ಓವರ್‌ಟೇಕ್ ಮಾಡಿತ್ತು. ಅಲ್ಲದೆ ಕಾರಿನಲ್ಲಿದ್ದ ಇಬ್ಬರು ಏಕಾಎಕಿ ಅವರ ಮೇಲೆ ತಲವಾರು ಬೀಸಿದ ಪರಿಣಾಮ ಶಾಕಿರ್‌ರ ತುಟಿ ಮತ್ತು ಬಲಗಣ್ಣಿಗೆ ಗಾಯವಾಗಿದೆ. ಪ್ರಾಣ ಭಯದಿಂದ ತಕ್ಷಣ ಶಾಕಿರ್ ರಿಕ್ಷಾವನ್ನು ಎಕ್ಕೂರು ಕಡೆಗೆ ಚಲಾಯಿಸಿಕೊಂಡು ಹಿಂದಿರುಗಿದರು. ದುಷ್ಕರ್ಮಿಗಳು ಶಾಕಿರ್‌ರನ್ನು ಹಿಂಬಾಲಿಸಿದರೂ ಕೂಡ ಎಕ್ಕೂರು ಬಳಿ ಜನರು ಇರುವುದನ್ನು ಕಂಡು ಪರಾರಿಯಾದರು. ದುಷ್ಕರ್ಮಿಗಳು ಪರಾರಿಯಾದುದನ್ನು ಖಚಿತಪಡಿಸಿಕೊಂಡ ಬಳಿಕ ಶಾಕಿರ್ ಮರಳಿ ತೊಕ್ಕೊಟ್ಟಿಗೆ ಆಗಮಿಸಿ ಖಾಸಗಿ ಆಸ್ಪತ್ರೆಗೆ ದಾಖಲಾದರು. ನಂತರ ಮನೆಯವರಿಗೆ ವಿಷಯ ತಿಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾದರು. ಇದೀಗ ಅಪಾಯದಿಂದ ಪಾರಾಗಿದ್ದರೂ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ’ ಎಂದು ಶಾಕಿರ್‌ರ ನಿಕಟವರ್ತಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಗುರುತು ಪತ್ತೆ: ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಆರೋಪಿಗಳಾದ ಭವಿತ್ ರಾಜ್ ಮತ್ತು ವೆಂಕಟೇಶ್ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಆರೋಪಿ ಭವಿತ್‌ರಾಜ್‌ನ ಮೇಲೆ ಈ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿವೆ ಎಂದು ತಿಳಿದು ಬಂದಿದೆ. ಅವರು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.