×
Ad

ತಸ್ಮನ್ ಸಮುದ್ರದಲ್ಲಿ ದೈತ್ಯ ಹೊಗೆ ಉಂಗುರಗಳು ಪತ್ತೆ!

Update: 2017-12-27 21:18 IST

ಲಂಡನ್, ಡಿ.27: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಉಪಗ್ರಹವು ಕಳುಹಿಸಿರುವ ಚಿತ್ರಗಳಲ್ಲಿ ತಸ್ಮನ್ ಸಮುದ್ರದಲ್ಲಿ ದೈತ್ಯ ಹೊಗೆ ಉಂಗುರಗಳನ್ನು ವಿಜ್ಞಾನಿಗಳು ಗುರುತಿಸಿದ್ದು, ಈ ಹೊಗೆ ಉಂಗುರಗಳು ಸಮುದ್ರದ ಸಣ್ಣ ಜೀವಿಗಳನ್ನು ಅತ್ಯಂತ ವೇಗವಾಗಿ ಬಹಳ ದೂರದವರೆಗೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಉಪಗ್ರಹದಿಂದ ಸೆರೆಹಿಡಿಯಲಾಗಿರುವ ಸಮುದ್ರ ಮಟ್ಟದ ಅಳತೆ ಮತ್ತು ಅದೇ ಸಮಯದಲ್ಲಿ ಸೆರೆಹಿಡಿಯಲಾಗಿರುವ ಸಮುದ್ರದ ಮೇಲ್ಮೈ ಉಷ್ಣತೆಯ ಚಿತ್ರಗಳನ್ನು ಜೊತೆಯಾಗಿ ವಿಶ್ಲೇಷಿಸಿದಾಗ ಈ ಹೊಗೆ ಉಂಗುರಗಳಿರುವುದು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಾಗರದ ತುಂಬಾ ಸುಳಿಗಳು ನೂರು-ಸಾವಿರ ಕಿಲೋ ಮೀಟರ್‌ವರೆಗೆ ವ್ಯಾಪಿಸಿರುತ್ತವೆ. ಹೊಗೆ ಉಂಗುರಗಳೆಂದರೆ ಈ ರೀತಿಯ ಎರಡು ಸುಳಿಗಳು ಜೊತೆಯಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತಿರುತ್ತವೆ ಮತ್ತು ಸಾಮಾನ್ಯ ಸುಳಿಗಳಿಗಿಂತ ನೂರು ಪಟ್ಟು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತವೆ. ಇಂಥಾ ಹೊಗೆ ಉಂಗುರಗಳು ಆಸ್ಟ್ರೇಲಿಯಾದ ನೈಋತ್ಯ ಭಾಗದಲ್ಲಿರುವ ತಸ್ಮನ್ ಸಮುದ್ರ ಮತ್ತು ದಕ್ಷಿಣ ಆಫ್ರಿಕಾದ ಪಶ್ಚಿಮಕ್ಕಿರುವ ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಕಂಡುಬಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಾಗರದಲ್ಲಿ ಸೃಷ್ಟಿಯಾಗುವ ಸುಳಿಗಳು ಬಹುತೇಕ ಪಶ್ಚಿಮದ ಕಡೆಗೆ ಸಾಗುತ್ತವೆ. ಆದರೆ ಎರಡು ಸುಳಿಗಳು ಜೊತೆಯಾಗುವ ಮೂಲಕ ಅವುಗಳು ಪೂರ್ವ ದಿಕ್ಕಿಗೂ ಸಾಗಬಹುದು ಮತ್ತು ಸಾಮಾನ್ಯ ಸುಳಿಗಳಿಗಿಂತ ಹತ್ತುಪಟ್ಟು ಹೆಚ್ಚು ವೇಗವಾಗಿ ಸಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇಂಥ ಹೊಗೆ ಉಂಗುರಗಳು ಸೃಷ್ಟಿಯಾಗಲು ಶಾಂತ ಸಮುದ್ರದ ಅಗತ್ಯವಿರುತ್ತದೆ. ಇದು ಕೂಡಾ ಒಂದು ಅಸಹಜ ಪ್ರಕ್ರಿಯೆಯಾಗಿದೆ. ಸಾಗರದ ಇತರ ಭಾಗಗಳನ್ನೂ ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಆದರೆ ಇಂಥ ಹೊಗೆ ಉಂಗುರಗಳನ್ನು ಆಸ್ಟ್ರೇಲಿಯಾದ ಸುತ್ತಮುತ್ತಲ ಸಮುದ್ರದಲ್ಲಿ ಮತ್ತು ದಕ್ಷಿಣ ಅಟ್ಲಾಂಟಿಕ್‌ನಲ್ಲಿ ಮಾತ್ರ ಕಂಡಿದ್ದೇವೆ ಎಂದು ವಿಜ್ಞಾನಿಗಳು ಅಭಿಪ್ರಾಯಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News