ಕ್ರೀಡೆ ಬದುಕಿನ ಭಾಗವಾಗಿರಲಿ: ಸಾಂಡ್ರಾ ಡಿಸೋಜ
ಉಡುಪಿ, ಡಿ.27: ಕ್ರೀಡೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರಬೇಕು. ಕ್ರೀಡೆಯಿಂದ ಆರೋಗ್ಯ ಹಾಗೂ ದೈಹಿಕ ಕ್ಷಮತೆ ಯಾವತ್ತೂ ಸ್ಥಿರವಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ಸಮತೋಲನವೂ ಇದರಿಂದ ಉತ್ತಮವಾಗಿರುತ್ತದೆ ಎಂದು ರಾಷ್ಟ್ರೀಯ ಕ್ರೀಡಾಪಟು ಸಾಂಡ್ರಾ ಅನ್‌ಸ್ಟಿಲಾ ಡಿಸೋಜ ಹೇಳಿದ್ದಾರೆ.
ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸಂಜೆ ಆರಂಭಗೊಂಡ 2017ನೇ ಸಾಲಿನ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತ್ರಿವರ್ಣದ ಬಲೂನುಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಸಾಂಡ್ರಾ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಇದಕ್ಕೆ ಮುನ್ನ ಅವರು ಒಂದು ಮಹಿಳಾ ತಂಡವೂ ಸೇರಿದಂತೆ ಐದು ಕ್ರೀಡಾ ತಂಡಗಳ ಪಥಸಂಚಲನದಲ್ಲಿ ಗೌರವ ರಕ್ಷೆ ಯನ್ನು ಸ್ವೀಕರಿಸಿದರು.
ಬೈಂದೂರು ಠಾಣೆಯ ಸಿಪಿಸಿ ನಾಗೇಶ್ ಗೌಡ ಅವರು ಕ್ರೀಡಾ ಜ್ಯೋತಿಯನ್ನು ತಂದು ಬಳಿಕ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಡಿಎಆರ್‌ನ ಸಹದೇವ ಎಸ್.ಯಮ್ಮೋಜಿ ಕ್ರೀಡಾಪಟುಗಳ ಪರವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ ಅತಿಥಿ ಗಳನ್ನು ಸ್ವಾಗತಿಸಿದರೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ವಂದಿಸಿದರು. ಜಿಲ್ಲಾ ಪೊಲೀಸ್ ಕಂಟ್ರೋಲ್‌ರೂಮಿನ ಪ್ರಭಾರ ಪಿಎಸ್‌ಐ ಬಿ.ಮನಮೋಹನ್ ರಾವ್ ಕಾರ್ಯಕ್ರಮ ನಿರೂಪಿಸಿದರು.