ಯಾವುದೇ ಭ್ರಷ್ಟಾಚಾರ ನಡೆಸಿಲ್ಲ: ಸ್ಯಾಮ್‌ಸಂಗ್ ಉತ್ತರಾಧಿಕಾರಿ ಜೇ ಲೀ
ಸಿಯೋಲ್, ಡಿ.27: ದಕ್ಷಿಣ ಕೊರಿಯಾದ ಮೂಲದ ದೈತ್ಯ ಸಂಸ್ಥೆ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉತ್ತರಾಧಿಕಾರಿ ಜೇ ವೈ. ಲೀ ತಾನು ಯಾವುದೇ ರೀತಿಯ ಭ್ರಚ್ಟಾಚಾರ ನಡೆಸಿಲ್ಲ ಎಂದು ಬುಧವಾರ ಹೇಳಿಕೆ ನೀಡಿದ್ದಾರೆ. 49ರ ಹರೆಯದ ಲೀ ದ.ಕೊರಿಯಾದ ಮಾಜಿ ರಾಷ್ಟ್ರಪತಿ ಪಾರ್ಕ್ ಗ್ವಯೇನ್‌ಹೈಗೆ ಲಂಚ ನೀಡಿದ ಆರೋಪದಲ್ಲಿ ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ರಾಷ್ಟ್ರಪತಿಗೆ ಲಂಚ ನೀಡುವ ಮೂಲಕ ಲೀ, ಜಗತ್ತಿನ ಅತ್ಯಂತ ಪ್ರಮುಖ ಇಲೆಕ್ಟ್ರಾನಿಕ್ಸ್ ಸಂಸ್ಥೆಗಳಲ್ಲಿ ಒಂದಾದ ಸ್ಯಾಮ್‌ಸಂಗ್ ಮೇಲೆ ತಮ್ಮ ಹಿಡಿತವನ್ನು ಗಟ್ಟಿಗೊಳಿಸಿದ್ದರು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಲೀ, ಸಿಯೋಲ್ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು ಇದರ ವಿಚಾರಣೆಯು ಜನವರಿಯಲ್ಲಿ ನಡೆಯುವ ಸಾಧ್ಯತೆಯಿದೆ.
ಮಾಜಿ ರಾಷ್ಟ್ರಪತಿಗೆ ಲಂಚ ನೀಡಿದ ಆರೋಪದಲ್ಲಿ ಜೇ ಲೀಯನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿದ್ದು, ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಕೆಳನ್ಯಾಯಾಲಯ ಅವರಿಗೆ ಐದು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿತ್ತು. ಪಾರ್ಕ್ ಅನ್ನು ಮಾರ್ಚ್‌ನಲ್ಲಿ ರಾಷ್ಟ್ರಪತಿ ಸ್ಥಾನದಿಂದ ವಜಾ ಮಾಡಲಾಗಿತ್ತು.
ಜೇ ಲೀ ಮಾಜಿ ರಾಷ್ಟ್ರಪತಿ ಪಾರ್ಕ್ ಅನ್ನು ನಾಲ್ಕು ಬಾರಿ ವೈಯಕ್ತಿಕವಾಗಿ ಭೇಟಿಯಾಗಿದ್ದರು ಎಂಬ ಆರೋಪವನ್ನು ತಳ್ಳಿಹಾಕಿರುವ ಲೀ ತಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.
ನೇರವಾಗಿ ರಾಷ್ಟ್ರಪತಿಯಿಂದ ನೆರವನ್ನು ಕೋರಿರಲಿಲ್ಲ. ಆದರೆ 2015ರಲ್ಲಿ ಸ್ಯಾಮ್‌ಸಂಗ್‌ನ ಎರಡು ಅಂಗಸಂಸ್ಥೆಗಳನ್ನು ವಿಲೀನ ಮಾಡಿರುವುದು ಸ್ಯಾಮ್‌ಸಂಗ್ ಸಂಸ್ಥೆ ಮೇಲೆ ಲೀಯ ಹಿಡಿತವನ್ನು ಗಟ್ಟಿಗೊಳಿಸಲು ಸಹಕಾರಿಯಾಗಿತ್ತು. ಹಾಗಾಗಿ ಅವರು ಸಂಸ್ಥೆಯ ಮೇಲೆ ತಮ್ಮ ನಿಯಂತ್ರಣವನ್ನು ಸಾಧಿಸಲು ರಾಷ್ಟ್ರಪತಿಯವರ ಸಹಾಯ ಕೋರಿದ್ದರು ಎಂಬುದನ್ನು ಇದು ಸೂಚಿಸುತ್ತದೆ ಎಂದು ನ್ಯಾಯಾಲಯ ತಿಳಿಸಿತ್ತು.