ಗಿಡ, ಮರಗಳಿಗೆ ಬ್ಯಾನರ್ ಕಟ್ಟಿದರೆ ಕಾನೂನು ಕ್ರಮ: ಪುತ್ತೂರು ಅರಣ್ಯಾಧಿಕಾರಿ ಎಚ್ಚರಿಕೆ
ಪುತ್ತೂರು, ಡಿ. 27: ರಸ್ತೆ ಬದಿಯಲ್ಲಿ ಇಲಾಖೆಯ ವತಿಯಿಂದ ಬೆಳೆಸಲಾದ ಮರ , ಗಿಡಗಳಿಗೆ ಸಾರ್ವಜನಿಕರು ಬ್ಯಾನರ್, ಫ್ಲೆಕ್ಸ್ ಮತ್ತು ನಾಮಫಲಕವನ್ನು ಕಟ್ಟುತ್ತಿದ್ದು, ಈ ರೀತಿಯ ಪ್ರಕರಣ ಕಂಡು ಬಂದಲ್ಲಿ ಬ್ಯಾನರ್ ಹಾಕಿರುವ ಸಂಘಟನೆ ಅಥವಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದು ಅಥವಾ ದಂಡ ವಿಧಿಸುವ ಕಾರ್ಯವನ್ನು ಇಲಾಖೆ ಮಾಡಲಿದೆ ಎಂದು ಪುತ್ತೂರು ಉಪವಲಯ ಅರಣ್ಯಾಧಿಕಾರಿ ಕಾರ್ಯಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.
ಮಾಣಿ- ಮೈಸೂರು ರಾ. ಹೆದ್ದಾರಿಯ ಬದಿಗಳಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸುಮಾರು 6 ಸಾವಿರ ಗಿಡಗಳನ್ನು ನೆಡಲಾಗಿದೆ. ಇವುಗಳು ಬಹುತೇಕ ಬೆಳೆದು ಬಂದಿದೆ, ಆದರೆ ಬ್ಯಾನರ್ ಕಟ್ಟಿದ ಮತ್ತು ಗಿಡಕ್ಕೆ ಮೊಳೆ ಹೊಡೆದ ಪರಿಣಾಮ ಕೆಲವೊಂದು ಗಿಡಗಳು ಸತ್ತು ಹೋಗಿವೆ. ಸಾರ್ವಜನಿಕರು ತಮ್ಮ ಕಾರ್ಯಕ್ರಮದ ಅಥವಾ ಕೆಲವೊಂದು ಸಂಸ್ಥೆಯವರು ಇಲಾಖೆಯ ಗಿಡಕ್ಕೆ ಬ್ಯಾನರ್ ಕಟ್ಟುವ ಕಾರಣದಿಂದ ಕೆಲವೊಂದು ಗಿಡಗಳು ಮುರಿದು ಬಿದ್ದು ಸತ್ತು ಹೋಗಿವೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಾವಿರಾರು ರೂ. ಖರ್ಚು ಮಾಡಿ ಗಿಡಿ ನೆಡುವ ಕಾರ್ಯವನ್ನು ಮಾಡಿದೆ ಸಾರ್ವಜನಿಕರು ಪರಿಸರದ ಕುರಿತು ಕಾಳಜಿ ವಹಿಸಬೇಕು ಎಂದು ಹೇಳಿದ ಅವರು ಯಾವುದೇ ಪ್ರಕರಣಗಳು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ದರ್ಬೆ, ಸಂಟ್ಯಾರ್, ಕುಂಬ್ರ, ತಿಂಗಳಾಡಿ, ಕಾವು , ಈಶ್ವರಮಂಗಲ, ಅಮ್ಚಿನಡ್ಕ, ಪುತ್ತೂರು ನಗರ, ಕೋಡಿಂಬಾಡಿ, ಕಬಕ ಮೊದಲಾದ ಕಡೆಗಳಲ್ಲಿ ಗಿಡಗಳಿಗೆ ಕಟ್ಟಿದ ಬ್ಯಾನರ್ ಮತ್ತು ಫಲಕಗಳನ್ನು ತೆರವು ಮಾಡಿದ್ದೇವೆ. ಉಪವಲಯ ವ್ಯಾಪ್ತಿಯಲ್ಲಿರುವ ಅರಣ್ಯಾಧಿಕಾರಿಗಳಿಗೆ ಈ ಕುರಿತು ಕ್ರಮಕೈಗೊಳ್ಳುವಂತೆಯೂ ಸೂಚನೆಯನ್ನು ನೀಡಲಾಗಿದೆ ಎಂದು ಕಾರ್ಯಪ್ಪ ಅವರು ತಿಳಿಸಿದ್ದಾರೆ.