ಯುವಜನರು ಹಿಂಸೆ, ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ: ಪ್ರಮೋದ್ ಮಧ್ವರಾಜ್
ಮಂಗಳೂರು, ಡಿ.27: ದೇಶದಲ್ಲಿ ಹಿಂಸೆ, ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವ ಯುವಜನರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕೆಲಸ ಜೇಸೀಸ್‌ನಂತಹ ಸಂಸ್ಥೆಯಿಂದ ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ಯುವಜನ ಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಶುಭ ಹಾರೈಸಿದರು.
ಜೇಸೀಸ್ ಸಂಸ್ಥೆಯ ರಾಷ್ಟ್ರೀಯ ಸಮ್ಮೇಳನ ‘ನೆಟ್‌ಕಾನ್ 2017 ’ನ್ನು ನಗರದ ಫಾದರ್ ಮುಲ್ಲಾರ್ಸ್ ಸಭಾಂಗಣದಲ್ಲಿಂದು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಪಂಚದಲ್ಲಿ ಭಾರತ ಅತ್ಯಂತ ದೊಡ್ಡ ಸಂಖ್ಯೆಯ ಯುವಕರನ್ನು ಹೊಂದಿರುವ ದೇಶವಾಗಿದೆ. ಭಾರತದಲ್ಲಿ ಶೇ 70ರಷ್ಟು ಜನರು 40ವರ್ಷದೊಳಗಿನವರು, ಪ್ರಪಂಚದ ಬೇರೆ ಯಾವ ದೇಶದಲ್ಲೂ ಈ ರೀತಿಯ ಯುವಜನರ ಮಾನವ ಸಂಪನ್ಮೂಲ ಇಲ್ಲ. ಆದರೆ ಈ ಯುವ ಜನರಲ್ಲಿ ಕೆಲವರು ಇತ್ತೀಚಿನ ದಿನಗಳಲ್ಲಿ ಹಿಂಸೆಯಂತಹ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಈ ನಿಟ್ಟಿನಲ್ಲಿ ಯುವಜನರ ಮೇಲೆ ಪ್ರಭಾವ ಬೀರಲು ಮತ್ತು ಅವರನ್ನು ಸರಿಯಾದ ದಾರಿಯಲ್ಲಿ ತರುವಲ್ಲಿ ವ್ಯಕ್ತಿತ್ವ ವಿಕಸನ ಚಟುವಟಿಕೆಗೆ ಹೆಚ್ಚು ಒತ್ತು ನೀಡುವ ಜೇಸೀಸ್ ಸಂಸ್ಥೆಗೆ ಸಾಧ್ಯವಿದೆ. ಶಿಕ್ಷಣ, ಆರೋಗ್ಯ ಹಾಗೂ ಸಮುದಾಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮುಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ರಾಷ್ಟ್ರೀಯ ಜೀಸೀಸ್ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಜೇಸೀಸ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ರಾಮ್ ಕುಮಾರ್ ಮೆನನ್ ವಹಿಸಿ ಮಾತನಾಡುತ್ತಾ, ಮಂಗಳೂರಿನಲ್ಲಿ ಎರಡನೆ ಬಾರಿಗೆ ಜೇಸೀಸ್ ನ 62ನೆ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿರುವುದು ಮಹತ್ವದ ಸಂಗತಿಯಾಗಿದೆ ಎಂದರು.
ಯುವಜನರಿಗೆ ಉತ್ತಮ ಅವಕಾಶ ಕಲ್ಪಿಸುವ ಧ್ಯೇಯದೊಂದಿಗೆ ಸಾಗುತ್ತಿರುವ ಈ ವರ್ಷದ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯ ಯುವಜನರು ಸಂಘಟನೆಗೆ ಸೇರಿದ್ದರೆ. ದೇಶದಲ್ಲಿರುವ ಅಗಾಧ ಪ್ರಮಾಣದ ಯುವ ಮಾನವ ಸಂಪನ್ಮೂಲದ ಸದ್ಭಳಕೆಯಾಗ ಬೇಕಾದರೆ ಅವರನ್ನು ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕಾಗಿದೆ ಎಂದರು.
ಸಮಾರಂಭದಲ್ಲಿ ಸಮ್ಮೇಳನ ಸಮಿತಿಯ ಸಂಚಾಲಕ ಟಿ.ಸುಕುಮಾರ್ ಸ್ವಾಗತಿಸಿದರು, ಅತಿಥಿಗಳಾಗಿ ಅಖಿಲ ಭಾರತ ಬಿಲ್ಲವ ಮಹಾ ಮಂಡಳಿಯ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ, ಕರ್ನಾಟಕ ಸರಕಾರದ ಮುಖ್ಯಸಚೇತಕ ಐವನ್ ಡಿ ಸೋಜ, ಜೇಸಿಐ ಇಂಡಿಯಾ ಫೌಂಡೇಶನ್ನಿನ ಅಧ್ಯಕ್ಷ ಕೆ. ವಲ್ಲಭದಾಸ್, ಸಮ್ಮೇಳನ ಸಮಿತಿಯ ನಿರ್ದೇಶಕ ಸದಾನಂದ ನಾವಡ, ಅರವಿಂದ ರಾವ್ ಕೇದಿಗೆ, ಮುರಳೀ ಶ್ಯಾಂ, ವಲಯಾಧ್ಯಕ್ಷ ಸಂತೋಷ್ .ಜಿ ಮೊದಲಾದವರು ಉಪಸ್ಥಿತರಿದ್ದರು.