ಉಡುಪಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರಿಂದ ಧರಣಿ
ಉಡುಪಿ, ಡಿ.28: ವಿವಿಧ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸು ವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ(ಸಿಐಟಿಯು)ದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗ್ರಾಪಂ ನೌಕರರು ಡಿ. 27ರಂದು ಮಣಿಪಾಲದಲ್ಲಿರುವ ಜಿಪಂ ಕಚೇರಿ ಎದುರು ಧರಣಿ ನಡೆಸಿದರು.
ರಾಜ್ಯದಾದ್ಯಂತ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನೀಡಲಾಗುತ್ತಿದ್ದ ಭಡ್ತಿಗೆ ಪಿಯುಸಿ ವಿದ್ಯಾರ್ಹತೆ ಪರಿಗಣಿಸುತ್ತಿರುವುದನ್ನು ರದ್ದು ಗೊಳಿಸಿ ಹಿಂದಿನಂತೆ ಎಸೆಸೆಲ್ಸಿ ವಿದ್ಯಾರ್ಹತೆಯನ್ನು ಮುಂದುವರೆಸಬೇಕು. ಡಾಟಾ ಎಂಟ್ರಿ ಅಪರೇಟರ್ ಹುದ್ದೆಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವವ ರನ್ನು ಮುಂದುವರೆಸಬೇಕು. ಗ್ರಾಪಂನಲ್ಲಿ ಬಿಲ್ಲು ವಸೂಲಿಗ, ಪಂಪುಚಾಲಕ ಮತ್ತು ಜವಾನರಿಗೆ ಏಕಕಾಲಕ್ಕೆ ಅನುಮೋದನೆ ನೀಡಬೇಕು. ಕನಿಷ್ಠ ವೇತನಕ್ಕಿಂತ ಹೆಚ್ಚಿನ ವೇತನ ಪಡೆಯುವ ನೌಕರರ ವೇತನಕ್ಕೆ ರಕ್ಷಣೆ ಒದಗಿಸಬೇಕು.
1500 ಗ್ರಾಪಂಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಕೂಡಲೇ ಜಾರಿಗೊಳಿಸು ವುದರ ಜೊತೆಗೆ ಎಲ್ಲಾ ಗ್ರಾಪಂಗಳಿಗೂ ಲೆಕ್ಕ ಸಹಾಯಕರ ಹುದ್ದೆಯನ್ನು ಸೃಷ್ಟಿಸಿ ಅದಕ್ಕೆ ಅರ್ಹ ಗ್ರಾ.ಪಂ. ನೌಕರರನ್ನು ನೇಮಿಸಬೇಕು. ಪಿಎಫ್ ಬಗ್ಗೆ 2008 ರಲ್ಲಿ ಹೊರಡಿಸಿರುವ ಆದೇಶವು ಕಾರ್ಯಗತಗೊಳ್ಳಲು ಸೂಕತಿ ನಿಯಮ ರೂಪಿಸಬೇಕು. ಗ್ರಾ.ಪಂ.ನೌಕರರಿಗೆ ಇಎಸ್‌ಐ ಸೌಲಭ್ಯ ಒದಗಿಸಬೇಕು. ಸೇವಾ ನಿಯಮಾವಳಿಯ ಬಗ್ಗೆ ಕರಡು ತಯಾರಿಕೆಯ ಪ್ರಕ್ರಿಯೆಯನ್ನು ಕೂಡಲೇ ನಡೆಸಿ, ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಕುರಿತ ಮನವಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಸಿ, ಜಿಪಂ ಹಂತದಲ್ಲಿ ಪರಿಹರಿಸ ಬಹುದಾದ ಸಮಸ್ಯೆಗಳ ಬಗ್ಗೆ ಜ.12ರಂದು ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಮೇಶ್ ನಾಯ್ಕ, ಕಾರ್ಕಳ ತಾಲೂಕು ಅಧ್ಯಕ್ಷ ಪ್ರಸಾದ್ ಶೆಟ್ಟಿ, ಮುಖಂಡ ರಾದ ಸಂಜೀವ ತಕ್ಕಟ್ಟೆ, ಕೃಷ್ಣ ಅಂಪಾರು, ಶೇಖರ ನಾಯ್ಕೆ ಚೇರ್ಕಾಡಿ, ಅನಿತಾ ಬಸ್ರೂರು, ವಿಜಯಾ ಶಿರಿಯಾರ, ಆಶಾ ಹೆಗ್ಗುಂಜೆ, ಶ್ಯಾಮ ಕಡತಿಲ, ಚಂದ್ರ ಶೇಖರ ಮರ್ಣೆ, ಸುರೇಶ ಬಡಗಬೆಟ್ಟು, ನಾರಾಯಣ ಶ್ಯಾನುಭೋಗ ಗಂಗೊಳ್ಳಿ, ಅನಂತ ಬೆಳ್ವೆ, ಅಣ್ಣಪ್ಪಪೂಜಾರಿ ಹಳ್ಳಿಹೊಳೆ, ಶಾಲಿನಿ ತಲ್ಲೂರು, ಭವಾನಿ ಉಪ್ಪೂರು, ಸುಮತಿ ಮೊದಲಾದವರು ಉಪಸ್ಥಿತರಿದ್ದರು.