ಡಿ. 31: ಅಜ್ಜರ ಕಾಡು ಭುಜಂಗ ಪಾರ್ಕಿನಲ್ಲಿ ಶ್ವಾನ ಪ್ರದರ್ಶನ
ಉಡುಪಿ, ಡಿ. 28: ಜಿಲ್ಲಾಡಳಿತ, ಕರ್ನಾಟಕ ಪಶು ವೇದಿಕೆ ಸಂಘ ಮತ್ತು ಉಡುಪಿ ಜಿಲ್ಲಾ ಪ್ರಾಣಿ ದಯಾ ಸಂಘಗಳ ನೇತೃತ್ವ ಮತ್ತು ಇತರ ದಾನಿಗಳ ಸಹಕಾರದಿಂದ ಉಡುಪಿ ಪರ್ಬದ ಅಂಗವಾಗಿ ಶ್ವಾನ ಪ್ರದರ್ಶನವನ್ನು ಅಜ್ಜರ ಕಾಡು ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಡಿ. 31ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಪ್ರದರ್ಶನದಲ್ಲಿ ಶುದ್ದ ತಳಿಯ ಶ್ವಾನಗಳಾದ ಡಾಬರ್‌ಮಾನ್, ಅಲ್ಸೇಶನ್, ಜರ್ಮನ್ ಶಪರ್ಡ್, ರೋಟ್ ವೀಲರ್, ಡಾಲ್ಮೇಶನ್, ಮುದೋಳ, ಪೆಮೋರಿಯನ್, ಲ್ಯಾಬ್ರಾಡಾರ್ ಮುಂತಾದ ತಳಿಯ ಶ್ವಾನಗಳು ಹಾಗೂ ದೇಶಿಯ ತಳಿಯ ಊರಿನ ಶ್ವಾನಗಳು ಪಾಲ್ಗೊಳ್ಳಲಿವೆ.
ಅತ್ಯುತ್ತಮ ಸಾಕಣಿಕೆ ಮತ್ತು ತಳಿ ಶುದ್ದತೆ ಪರಿಶೀಲಿಸಿ ಆಯಾ ತಳಿಯ ಶ್ವಾನಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ, ಆರು ತಿಂಗಳಿನ ನಾಯಿ ಮರಿಗಳಿಗೆ ಪ್ರಥಮ, ದ್ವಿತೀಯ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಂಡ ಶ್ವಾನ ಗಳಲ್ಲಿ ಒಂದಕ್ಕೆ ಚಾಂಪಿಯನ್ ನೀಡಿ 10,000 ರೂ. ನಗದು ಬಹುಮಾನ ನೀಡಲಾಗುವುದು. ಶ್ವಾನಗಳಲ್ಲಿರುವ ವಿಶೇಷ ಕೌಶಲ್ಯವನ್ನು ಕೂಡ ಈ ಪ್ರದರ್ಶನ ದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಗಿದೆ.
ನೋಂದಾವಣಿ ಉಚಿತವಾಗಿದ್ದು, ಡಿ.31ರಂದು ಬೆಳಗ್ಗೆ 8.30ರಿಂದ 10 ಗಂಟೆಯೊಳಗೆ ತಮ್ಮ ಶ್ವಾನದೊಂದಿಗೆ ಆಗಮಿಸಿ ಹೆಸರು ನೋಂದಾಯಿಸಿಕೊಳ್ಳ ಬೇಕು. ಪ್ರದರ್ಶನವನ್ನು 10 ಗಂಟೆಗೆ ಸಚಿವ ಪ್ರಮೋದ್ ಮದ್ವರಾಜ್ ಉದ್ಘಾಟಿ ಸಲಿರುವರು ಎಂದು ಉಡುಪಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸರ್ವೋತ್ತಮ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.