ಪರಿಹಾರ ನೀಡಲು ತೆರಳಿದ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ ಕುಟುಂಬಸ್ಥರು
ಭಟ್ಕಳ, ಡಿ. 28: ಕಳೆದ ಸೆಪ್ಟೆಂಬರ್ 14 ರಂದು ಪುರಸಭೆಯ ಅಂಗಡಿ ಮಳಿಗೆ ತೆರವು ಕಾರ್ಯಕ್ಕೆ ಆಕ್ರೋಶಗೊಂಡು ಮೈಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ 2 ದಿನದ ಬಳಿಕ ಮೃತಪಟ್ಟ ಪುರಸಭಾ ಅಂಗಡಿಕಾರ ರಾಮಚಂದ್ರ ನಾಯ್ಕ ಮನೆಗೆ ಗುರುವಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಚೆಕ್ ವಿತರಣೆ ಮೊತ್ತ ನೀಡಲು ತಹಶೀಲ್ದಾರ್ ವಿ.ಎನ್.ಬಾಡಕರ್ ಹಾಗು ಶಾಸಕ ತೆರಳಿದ್ದು, ಈ ಸಂದರ್ಭ ಕುಟುಂಬಸ್ಥರು ಪರಿಹಾರದ ಮೊತ್ತವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸೆ.14ರಂದು ಜಿಲ್ಲಾಡಳಿತ ಆದೇಶದಂತೆ ಪುರಸಭೆ ಅಂಗಡಿ ಮಳಿಗೆಯನ್ನು ತೆರವು ಮಾಡಲು ಬಂದ ಅಧಿಕಾರಿಗಳ ಎದುರಲ್ಲೇ ಅಂಗಡಿಕಾರ ರಾಮಚಂದ್ರ ನಾಯ್ಕ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ನಂತರ ಮೃತಪಟ್ಟರು. ಮೃತನ ಕುಟುಂಬಕ್ಕೆ ಶಾಸಕ ವೈದ್ಯ ಹಾಗೂ ತಹಶೀಲ್ದಾರ್ ವಿ.ಎನ್. ಬಾಡಕರ್ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿಶೇಷ ಮೊತ್ತವನ್ನು ನೀಡಲೆಂದು ಮೃತ ರಾಮಚಂದ್ರ ನಾಯ್ಕ ಮನೆಗೆ ಹೋಗಿದ್ದು, ಈ ಸಂದರ್ಭ ಮೃತ ರಾಮಚಂದ್ರ ನಾಯ್ಕ ಸಹೋದರರು ಪರಿಹಾರ ಮೊತ್ತವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಜಿಲ್ಲಾಡಳಿತ ನೀಡಿದ ಭರವಸೆ ಹಾಗೇ ಇದ್ದು ಯಾವುದೇ ನ್ಯಾಯ ಸಿಕ್ಕಿಲ್ಲ, ಈ ಸಂದರ್ಭ ಪರಿಹಾರದ ಮೊತ್ತ ಸ್ವೀಕರಿಸಲು ಹೇಗೆ ಸಾಧ್ಯ. ಒಂದು ವೇಳೆ ಪರಿಹಾರದ ಮೊತ್ತ ಸ್ವೀಕರಿಸಬೇಕಾದರೆ ಸರಕಾರಕ್ಕೆ ನೀಡಿದ ಮನವಿಯ ಅನುಸಾರ ನಮ್ಮ ಮುಖಂಡರ ಅನುಮತಿಯ ಮೇರೆಗೆ ಪರಿಹಾರ ಮೊತ್ತವನ್ನು ಸ್ವೀಕರಿಸಲಾಗುವುದು ಎಂದು ಮೃತರ ಸಹೋದರರು ತಹಶೀಲ್ದಾರ್ ಅವರಿಗೆ ತಿಳಿಸಿದ್ದು, ಕಳೆದ ಒಂದು ವಾರದ ಹಿಂದೆ ಇವರ ಮನೆಯ ಹಿಂಬದಿಯ ಗೂಡಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಬಗ್ಗೆ ತಿಳಿಸಿದ್ದು, ಈ ತನಕ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಿಲ್ಲವೆ ಎಂದು ಶಾಸಕ ಹಾಗೂ ತಹಶೀಲ್ದಾರ್‍ರನ್ನು ಪ್ರಶ್ನಿಸಿದರು.
ಮೃತ ರಾಮಚಂದ್ರ ನಾಯ್ಕ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತವನ್ನು ತರಲಾಗಿದೆ ಎಂದು ಶಾಸಕ ವೈದ್ಯ ಹೇಳಿದಕ್ಕೆ ರಾಮಚಂದ್ರ ನಾಯ್ಕ ಸಹೋದರರು ಆತ ಆತ್ಮಹತ್ಯೆ ಮಾಡಿಕೊಳ್ಳಲು ಅಧಿಕಾರಿಗಳು ಪ್ರೇರಣೆ ನೀಡಿದ್ದು, ಇದೊಂದು ಕೊಲೆಯಾಗಿದೆ. ಈ ಬಗ್ಗೆ ಆತ ತನ್ನ ಕೊನೆಯ ಕ್ಷಣದಲ್ಲಿ ಹೇಳಿದ ವಿಡಿಯೋವೊಂದನ್ನು ತೋರಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪಟ್ಟು ಹಿಡಿದರು.
ಕೊನೆಗೆ ಶಾಸಕ ವೈದ್ಯ ಹಾಗೂ ತಹಶೀಲ್ದಾರ್ ಮೃತ ರಾಮಚಂದ್ರ ನಾಯ್ಕ ಮನೆಯಿಂದ ಪರಿಹಾರದ ಚೆಕ್ ಹಿಡಿದು ವಾಪಸ್ಸು ಹಿಂತಿರುಗಿದರು ಎಂದು ತಿಳಿದುಬಂದಿದೆ.