ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗದಿದ್ದಲ್ಲಿ ಮುಚ್ಚಲು ಸೂಚನೆ: ಜಿಲ್ಲಾಧಿಕಾರಿ
ಮಂಗಳೂರು, ಡಿ.28: ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಅಧ್ಯಕ್ಷತೆಯಲ್ಲಿ ಗುರುವಾರ ಜರಗಿತು.
ಬಾಲನ್ಯಾಯ ಕಾಯ್ದೆಯಲ್ಲಿ ನೋಂದಣಿಯಾಗದ ಮಕ್ಕಳ ಪಾಲನಾ ಸಂಸ್ಥೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. 3 ತಿಂಗಳ ಒಳಗೆ ನೋಂದಾಯಿಸದಿದ್ದರೆ ಸಂಸ್ಥೆಯನ್ನು ಮುಚ್ಚಿಸಿ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016ನ್ನು ಎಲ್ಲಾ ಶೈಕ್ಷಣಿಕ ಶಿಕ್ಷಣ ಸಂಸ್ಥೆಗಳಲ್ಲಿ ಸಮರ್ಪಕವಾಗಿ ರೂಪಿಸುವಂತೆ ಸಿಆರ್‌ಪಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಡಿಡಿಪಿಐಗೆ ಸೂಚಿಸಿದ ಜಿಲ್ಲಾಧಿಕಾರಿ, ಮಕ್ಕಳ ಹಕ್ಕುಗಳ ಕುರಿತು ಮಾಸಿಕ ವರದಿಯನ್ನು ಗ್ರಾಪಂಗಳು ಕಡ್ಡಾಯವಾಗಿ ನೀಡುವಂತೆ ನಿಯಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಪ್ರತಿ ಗ್ರಾಪಂ ಮಟ್ಟದಲ್ಲಿ ಮಕ್ಕಳ ಸಮಿತಿಯನ್ನು ರಚಿಸಿದ್ದು ಮಕ್ಕಳ ಗ್ರಾಮಸಭೆಯನ್ನು ಯೋಜಿತ ರೀತಿಯಲ್ಲಿ ನಡೆಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ 2012ರಿಂದ 2017ರ ನವೆಂಬರ್‌ವರೆಗೆ 421 ಪೊಕ್ಸೊ ಪ್ರಕರಣಗಳು ದಾಖಲಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ಇನ್ನು ಕೂಡ ಇತ್ಯಾರ್ಥವಾಗದೆ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ಪರಿಶೀಲಿಸಲು ಸಾರ್ವಜನಿಕ ಕಾನೂನನ್ನು ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯ ಮುಖಾಂತರ ಶಾಲಾ ಮಕ್ಕಳಿಗೆ ಪೊಕ್ಸೊ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿಸಲು ತಿಳಿಸಿದರು.
ಸಭೆಯಲ್ಲಿ ದ.ಕ. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ. ಶಿವರಾಮಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ಎ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.