ಮರವಂತೆ ಬ್ರೇಕ್‌ವಾಟರ್ ಕಾಮಗಾರಿ ಪೂರ್ಣಗೊಳಿಸಲು ಬಿಜೆಪಿ ಆಗ್ರಹ

Update: 2017-12-28 15:29 GMT

ಉಡುಪಿ, ಡಿ.29: ಮರವಂತೆ ಬ್ರೇಕ್ ವಾಟರ್ ಕಾಮಗಾರಿ ಸ್ಥಗಿತದಿಂದ ಸಮೀಪದ ರಸ್ತೆ ಹಾಳಾಗಿದ್ದು, ತಕ್ಷಣವೇ ಅನುದಾನ ಬಿಡುಗಡೆಗೊಳಿಸಿ ಬ್ರೇಕ್ ವಾಟರ್ ಕಾಮಗಾರಿ ಮುಂದುವರೆಸಬೇಕು ಮತ್ತು ರಸ್ತೆಗೆ ತುರ್ತು ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಿಯೋಗ ಇಂದು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿತು.

ಮರವಂತೆಯಲ್ಲಿ ರಾಜ್ಯ ಸರಕಾರದ ಅನುದಾನದಿಂದ ಬ್ರೇಕ್ ವಾಟರ್ ನಿರ್ಮಾಣ ಕಾರ್ಯಕೈಗೊಂಡು ಸುಮಾರು ನಾಲ್ಕು ವರ್ಷಗಳಾಗುತ್ತಿದೆ. ಬ್ರೇಕ್ ವಾಟರ್ ನಿರ್ಮಾಣವನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಸುಮಾರು 420ಮೀ ಕಾಮಗಾರಿ ಹೆಚ್ಚುವರಿಯಾಗಿ ನಿರ್ಮಾಣ ಮಾಡಬೇಕೆಂದು ಸರಕಾರ ನಿರ್ಧರಿ ಸಿತ್ತು. ಈ ಹಿನ್ನೆಲೆಯಲ್ಲಿ 27 ಕೋಟಿ ರೂ. ಹೆಚ್ಚುವರಿ ಯೋಜನಾ ವೆಚ್ಚವನ್ನು ಹಾಕಿಕೊಳ್ಳಲಾಗಿದೆ. ಆದರೆ ಆ ಅನುದಾನ ಈವರೆಗೂ ಬಿಡುಗಡೆಯಾಗದೆ ಕೆಲಸ ಸ್ಥಗಿತಗೊಂಡಿದೆ ಎಂದು ನಿಯೋಗ ತಿಳಿಸಿದೆ.

ಇದರಿಂದ ಅಲೆಗಳು ಬ್ರೇಕ್ ವಾಟರ್‌ನ ಬದಿಯಲ್ಲಿ ಹಾದು ಹೋಗುವ ರಸ್ತೆಗೆ ಅಪ್ಪಳಿಸಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಭಾಗದಲ್ಲಿ ಸುಮಾರು ನೂರಾರು ಮನೆಗಳು ಮತ್ತು ಸಾವಿರಾರು ಜನರು ತಮ್ಮ ನಿತ್ಯದ ಜೀವನಕ್ಕೆ ಈ ರಸ್ತೆಯನ್ನೇ ಅವಲಂಬಿಸಿದ್ದು, ಮಳೆಗಾಲದಲ್ಲಿ ಸಮುದ್ರದ ಅಲೆಗಳ ರಭಸದಿಂದ ಸುಮಾರು 5 ರಿಂದ 10 ಮನೆಗಳು ಹಾನಿಗೊಂಡಿವೆ ಎಂದು ನಿಯೋಗ ದೂರಿದೆ.

ಆದುದರಿಂದ ಬ್ರೇಕ್ ವಾಟರ್ ನಿರ್ಮಾಣದ ಹೆಚ್ಚುವರಿ ಯೋಜನಾ ವೆಚ್ಚದ ವನ್ನು ಮಂಜೂರು ಮಾಡಿ ಕಾಮಗಾರಿ ಮುಂದುವರಿಸಬೇಕು. ಸುಮಾರು 3 ಕಿ.ಮೀ. ಉದ್ದದ ರಸ್ತೆಯ ಸುರಕ್ಷತೆಗಾಗಿ ತಡೆಗೋಡೆ ನಿರ್ಮಾಣಕ್ಕಾಗಿ 5 ಕೋಟಿ ರೂ. ಮಂಜೂರು ಮಾಡಿ ಅನುಷ್ಠಾನಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಯ ವರನ್ನು ಆಗ್ರಹಿಸಿದರು.

ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಬಂದರು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನು ಕರೆದು ಬ್ರೇಕ್ ವಾಟರ್ ನಿರ್ಮಾಣಕ್ಕೆ ಮಂಜೂರಾದ ಅನುದಾನವನ್ನು ಬಿಡುಗಡೆಗೊಳಿಸಿ ಅನುಷ್ಠಾನಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡ ರಾದ ಬಿ.ಎಂ.ಸುಕುಮಾರ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಯಶ್‌ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಮರವಂತೆ ಗ್ರಾಪಂ ಅಧ್ಯಕ್ಷೆ ಅನಿತಾ ಆರ್.ಕೆ., ಮರವಂತೆ ಮೀನುಗಾರರ ಸಂಘದ ಪದಾ ಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News