2019,ಮಾರ್ಚ್‌ನೊಳಗೆ ಎಲ್ಲರಿಗೂ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ: ಕೇಂದ್ರ
ಹೊಸದಿಲ್ಲಿ,ಡಿ.28: 2019,ಮಾರ್ಚ್‌ನೊಳಗೆ ದೇಶದಲ್ಲಿಯ ಎಲ್ಲ ಮನೆಗಳಿಗೆ ವರ್ಷವಿಡೀ ದಿನದ 24 ಗಂಟೆಯೂ ಅಬಾಧಿತ ವಿದ್ಯುತ್ ಪೂರೈಕೆಯಾಗಲಿದೆ ಎಂದು ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು.
ಇನ್ನೂ ವಿದ್ಯುದೀಕರಣ ಬಾಕಿಯಿರುವ 1,694 ಗ್ರಾಮಗಳು 2018, ಡಿಸೆಂಬರ್ ನೊಳಗೆ ವಿದ್ಯುತ್ ಸಂಪರ್ಕ ಪಡೆಯಲಿವೆ ಮತ್ತು ಈ ನಿಟ್ಟಿನಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂದರು.
2019,ಮಾರ್ಚ್ ನಂತರ ತಾಂತ್ರಿಕ ಕಾರಣಗಳಿಂದ ವಿದ್ಯುತ್ ವ್ಯತ್ಯಯವನ್ನು ಹೊರತುಪಡಿಸಿ ನಿರಂತರ ವಿದ್ಯುತ್ ಒದಗಿಸುವಲ್ಲಿ ವೈಫಲ್ಯಕ್ಕಾಗಿ ವಿದ್ಯುತ್ ಡಿಸ್ಕಾಮ್ ಗಳಿಗೆ ದಂಡ ವಿಧಿಸಲು ನೂತನ ಕಾನೂನನ್ನು ತರಲಾಗುವುದು ಎಂದ ಸಚಿವರು, 2019,ಜನವರಿ ವೇಳೆಗೆ ಪ್ರಸರಣ ಮತ್ತು ವಿತರಣೆಯಲ್ಲಿ ವಿದ್ಯುತ್ ನಷ್ಟದ ಪ್ರಮಾಣವನ್ನು ಈಗಿನ ಶೇ.21ರಿಂದ ಶೇ.15ಕ್ಕೆ ತಗ್ಗಿಸುವ ಗುರಿಯನ್ನು ಸರಕಾರವು ಹೊಂದಿದೆ ಎಂದು ತಿಳಿಸಿದರು.
ದೇಶಾದ್ಯಂತ ವಿದ್ಯುತ್ ಮೂಲಸೌಕರ್ಯವನ್ನು ಉತ್ತಮಗೊಳಿಸಲು 1,75,000 ಕೋ.ರೂ.ಗಳನ್ನು ವ್ಯಯಿಸಲಾಗುತ್ತಿದೆ ಎಂದೂ ಅವರು ಹೇಳಿದರು.