ಉಡುಪಿ: ಸಂಚಾರಿ ತರಕಾರಿ ಮಾರುಕಟ್ಟೆ ಉದ್ಘಾಟನೆ

Update: 2017-12-28 15:50 GMT

ಉಡುಪಿ, ಡಿ.28: ರೈತ ತಾನು ಬೆಳೆದ ತರಕಾರಿಯನ್ನು ಮದ್ಯವರ್ತಿಗಳ ಕಾಟವಿಲ್ಲದೇ ನೇರವಾಗಿ ಗ್ರಾಹಕರಿಗೆ ತಲುಪಿಸುವ ವಿನೂತನ ಮೊಬೈಲ್ ಮಾರುಕಟ್ಟೆ ಯೋಜನೆ ಶುಕ್ರವಾರ ಬೆಳಗ್ಗೆ ಮಣಿಪಾಲದಲ್ಲಿ ಉದ್ಘಾಟನೆಗೊಳ್ಳಲಿದೆ.

ಬೆನೆಗಲ್, ಕುಕ್ಕೆಹಳ್ಳಿ ಹಾಗೂ ಮಟ್ಟುವಿನ ರೈತರು ರಚಿಸಿರುವ ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರಿ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ ಸಹಯೋಗದೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಸದ್ಯಕ್ಕೆ ಒಂದು ಮೊಬೈಲ್ ಯುನಿಟ್ ಮೂಲಕ ಉಡುಪಿ ಹಾಗೂ ಮಣಿಪಾಲದ ಗ್ರಾಹಕರಿಗೆ ನೇರವಾಗಿ ತಾಜಾ ತರಕಾರಿಯನ್ನು ತಲುಪಿಸಲಿದೆ.

ಈ ಮೂರು ಗ್ರಾಮಗಳ ತರಕಾರಿ ಬೆಳೆಗಾರ ರೈತರು ಸ್ಥಾಪಿಸಿರುವ ಸಂಘದ 250ಕ್ಕೂ ಅಧಿಕ ಸದಸ್ಯರೆಲ್ಲ ಸೇರಿ ತಮ್ಮ ಬೆಳೆಗಳನ್ನು ಒಂದೆಡೆ ಶೇಖರಿಸಿ ಅದನ್ನು ಉಡುಪಿ ಮತ್ತು ಮಣಿಪಾಲದ ಆಯ್ದ ಭಾಗಗಳಲ್ಲಿ ಮಾರಾಟ ಮಾಡುವ ಮೊಬೈಲ್ ಮಾರುಕಟ್ಟೆ ಇದಾಗಿದೆ.

ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪುವ ಈ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಉದ್ಘಾಟಿಸಲಿದ್ದಾರೆ ಎಂದು ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕ ಡಾ.ಹರೀಶ್ ಜೋಷಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಎಸ್‌ಒಎಂನ ನಿರ್ದೇಶ ಡಾ.ರವೀಂದ್ರನಾಥ್ ನಾಯಕ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News