×
Ad

ಡಿ.30: ಉಡುಪಿಯಲ್ಲಿ ಆನಂದತೀರ್ಥ ಜ್ಞಾನಯಾತ್ರೆ

Update: 2017-12-28 21:21 IST

ಉಡುಪಿ, ಡಿ.28: ಆಚಾರ್ಯ ಮಧ್ವರು ಅದೃಶ್ಯರಾಗಿ 700 ವರ್ಷ ಪೂರ್ಣಗೊಂಡ ಸಂಸ್ಮರಣೆಯಲ್ಲಿ ಆಯೋಜಿಸಲಾಗಿರುವ ಆನಂದತೀರ್ಥ ಜ್ಞಾನಯಾತ್ರೆ ಡಿ.30ರ ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಉಡುಪಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ತುಶಿಮಾಮದ ಅಧ್ಯಕ್ಷ ಕೆ.ಅರವಿಂದ ಆಚಾರ್ಯ ಇಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮ ಈಗಾಗಲೇ ಮೈಸೂರು ಮತ್ತು ಬೆಂಗಳೂರುಗಳಲ್ಲಿ ನಡೆದಿದ್ದು, ಮುಂದೆ ಚೆನ್ನೈ, ಹೈದರಾಬಾದ್, ಕೇರಳ, ಮುಂಬಯಿ, ಹುಬ್ಬಳ್ಳಿ, ಮಂತ್ರಾಲಯ ಅಲ್ಲದೇ ಅಮೆರಿಕದಲ್ಲೂ ನಡೆಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

ಡಿ. 30ರಂದು ಬೆಳಗ್ಗೆ 8:30ಕ್ಕೆ ಸಂಸ್ಕೃತ ಮಹಾಪಾಠ ಶಾಲೆಯಿಂದ ಮೆರವಣಿಗೆ ಮೂಲಕ ಮಧ್ವಾಚಾರ್ಯರ ಪ್ರತಿಮೆಯ ಮೆರವಣಿಗೆ ರಥಬೀದಿ ಮೂಲಕ ರಾಜಾಂಗಣಕ್ಕೆ ಬರಲಿದ್ದು, 10ಗಂಟೆಗೆ ಕಾರ್ಯಕ್ರಮವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಬಳಿಕ ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ಸಂಜೆ 4ಕ್ಕೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಂದ ವಿಶೇಷ ಪ್ರವಚನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಅಷ್ಟಮಠಗಳ ಯತಿಗಳು ಪಾಲ್ಗೊಳ್ಳುವರು ಎಂದವರು ನುಡಿದರು. ಸುದ್ದಿಗೋಷ್ಠಿಯಲ್ಲಿ ತುಶಿಮಾಮದ ಪ್ರದೀಪ್‌ಕುಮಾರ್ ಕಲ್ಕೂರ, ಯು.ವಾದಿರಾಜ ಆಚಾರ್ಯ, ಕೆ.ರವಿಪ್ರಕಾಶ್ ಭಟ್, ಭಾಸ್ಕರರಾವ್ ಕಿದಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News