ತನ್ನ ‘ಗುಡ್ ಮಾರ್ನಿಂಗ್’ ಸಂದೇಶಕ್ಕೆ ಪ್ರತಿಕ್ರಿಯಿಸದ ಸಂಸದರ ಬಗ್ಗೆ ಪ್ರಧಾನಿ ಬೇಸರ
ಹೊಸದಿಲ್ಲಿ, ಡಿ.28: ತಾನು ದಿನಾ ‘ಶುಭೋದಯ’ ಕೋರಿ ಕಳಿಸುತ್ತಿರುವ ಸಂದೇಶ ಕ್ಕೆ ಐದಾರು ಸಂಸದರನ್ನು ಹೊರತುಪಡಿಸಿ ಉಳಿದವರ್ಯಾರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರಧಾನಿ ಮೋದಿ ಬಿಜೆಪಿ ಸಂಸದರ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಆ್ಯಪ್‌ನಲ್ಲಿ ತಾನು ಕಳಿಸುತ್ತಿರುವ ಸಂದೇಶದ ಜೊತೆ ಕೆಲವೊಂದು ಮಹತ್ವದ ವಿಷಯಗಳಿರುತ್ತವೆ. ಆದ್ದರಿಂದ ಸದಾ ಅದನ್ನು ಗಮನಿಸಬೇಕು ಮತ್ತು ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಮೋದಿ ಬಿಜೆಪಿ ಸಂಸದರಿಗೆ ಕಿವಿಮಾತು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರಬೇಕು ಎಂದು ಇದೇ ವೇಳೆ ಅವರು ಸಂಸದರಿಗೆ ತಿಳಿಸಿದರು. ಕುಟುಂಬದ ಹಿರಿಯನಂತಿರುವ ಪ್ರಧಾನಿ ಸಂಸದರಿಗೆ ಸದಾ ತಿಳಿಹೇಳುತ್ತಿರಬೇಕು. ಇದನ್ನು ನಾವು ಸ್ವಾಗತಿಸುತ್ತೇವೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮ ಹೇಳಿದ್ದಾರೆ. ನರೇಂದ್ರ ಮೋದಿ ಆ್ಯಪ್ ಉತ್ತಮವಾಗಿದ್ದು ತಾನು ನಿರಂತರ ಉಪಯೋಗಿಸುತ್ತಿದ್ದೇನೆ ಎಂದು ಮತ್ತೊಬ್ಬ ಸಚಿವ ಎಸ್.ಎಸ್.ಅಹ್ಲುವಾಲಿಯಾ ತಿಳಿಸಿದ್ದಾರೆ. ನರೇಂದ್ರ ಮೋದಿ ಆ್ಯಪ್ ಅನ್ನು 2015ರಲ್ಲಿ ಬಿಡುಗಡೆಗೊಳಿಸಲಾಗಿದೆ.ಈ ಆ್ಯಪ್‌ನಲ್ಲಿ ಮೋದಿಯವರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಮೋದಿಯವರಿಂದ ಸಂದೇಶಗಳನ್ನು ನೇರವಾಗಿ ಪಡೆಯಬಹುದಾಗಿದೆ.
ಸಂಸತ್ ಕಲಾಪಗಳಿಗೆ ಸದಾ ಗೈರು ಹಾಜರಾಗುವ ಸಂಸದರು 2019ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗುವ ಸಾಧ್ಯತೆಯಿದೆ ಎಂದು ಕಳೆದ ಆಗಸ್ಟ್‌ನಲ್ಲಿ ಬಿಜೆಪಿ ಸಂಸದರನ್ನು ಮೋದಿ ತರಾಟೆಗೆತ್ತಿಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.