ಪ್ರತೀ ತಿಂಗಳು ಎಲ್‌ಪಿಜಿ ದರ ಏರಿಕೆ ಆದೇಶ ಹಿಂಪಡೆದ ಸರಕಾರ

Update: 2017-12-28 16:24 GMT

ಹೊಸದಿಲ್ಲಿ, ಡಿ.28: ಎಲ್‌ಪಿಜಿ ದರವನ್ನು ಪ್ರತೀ ತಿಂಗಳೂ 4 ರೂ. ಏರಿಸುವ ಆದೇಶವು ಬಡವರಿಗೆ ಉಚಿತ ಅಡುಗೆ ಅನಿಲ ವಿತರಿಸುವ ‘ಉಜ್ವಲ ಯೋಜನೆಗೆ’ ವಿರುದ್ಧವಾಗಿರುವ ಕಾರಣ ಈ ಆದೇಶವನ್ನು ಕೇಂದ್ರ ಸರಕಾರ ಹಿಂಪಡೆದಿದೆ.

 ಸಬ್ಸಿಡಿಯನ್ನು ಸಂಪೂರ್ಣ ತೊಡೆದುಹಾಕುವ ನಿಟ್ಟಿನಲ್ಲಿ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತೀ ತಿಂಗಳು 4 ರೂ. ಏರಿಸುವ ಆದೇಶವನ್ನು 2016ರ ಜುಲೈಯಲ್ಲಿ ಸರಕಾರ ಜಾರಿಗೊಳಿಸಿತ್ತು. ಈ ಬಳಿಕ ತೈಲ ಕಂಪೆನಿಗಳು 10 ಬಾರಿ ಎಲ್‌ಪಿಜಿ ಗ್ಯಾಸ್‌ನ ಬೆಲೆ ಏರಿಸಿವೆ. ಇದೀಗ ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಈ ಆದೇಶವನ್ನು ಹಿಂಪಡೆದಿರುವುದಾಗಿ ಸರಕಾರ ತಿಳಿಸಿದೆ. ವರ್ಷವೊಂದಕ್ಕೆ ಪ್ರತಿಯೊಂದು ಮನೆಗೂ 14.2 ಕಿ.ಗ್ರಾಂ. ತೂಕದ 12 ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಪೂರೈಸಲಾಗುತ್ತದೆ. ಹೆಚ್ಚುವರಿ ಸಿಲಿಂಡರ್‌ಗಳ ಅಗತ್ಯವಿದ್ದರೆ ಮಾರುಕಟ್ಟೆ ದರದಲ್ಲಿ ಖರೀದಿಸಬೇಕು.

   ಒಂದೆಡೆ ಬಡವರಿಗೆ ಉಚಿತ ಎಲ್‌ಪಿಜಿ ನೀಡುವುದಾಗಿ ಘೋಷಿಸಿರುವ ಸರಕಾರ, ಇನ್ನೊಂದೆಡೆ ಅಡುಗೆ ಅನಿಲ ದರ ಏರಿಸಿದರೆ ಪ್ರತಿಕೂಲ ಸಂಕೇತ ರವಾನೆಯಾಗುವ ಸಾಧ್ಯತೆಯಿರುವ ಕಾರಣ ಈ ಆದೇಶ ಹಿಂಪಡೆದಿರುವುದಾಗಿ ಸರಕಾರದ ಮೂಲಗಳು ತಿಳಿಸಿವೆ. ಅಕ್ಟೋಬರ್‌ನಿಂದ ತೈಲ ಕಂಪೆನಿಗಳು ಗ್ಯಾಸ್ ದರ ಏರಿಸಿಲ್ಲ. ಆದರೆ ತೆರಿಗೆ ಸಮಸ್ಯೆಯ ಕಾರಣ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯಲ್ಲಿ ಅಕ್ಟೋಬರ್ ಬಳಿಕವೂ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ. ಸರಕಾರದ ಯೋಜನೆಗಳ ಪ್ರಯೋಜನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುವ ಕಾರಣ ತೆರಿಗೆ ಸಮಸ್ಯೆ ಉಂಟಾಗಿದೆ. ಈ ಮೊದಲು ಡೀಲರ್‌ಗಳು ಸಬ್ಸಿಡಿಸಹಿತ ಬೆಲೆಯಲ್ಲಿ ಎಲ್‌ಪಿಜಿಯನ್ನು ಗ್ರಾಹಕರಿಗೆ ಪೂರೈಸುತ್ತಿದ್ದರು.ಆಗ ವ್ಯಾಟ್(ತೆರಿಗೆ) ಇದರಲ್ಲೇ ಕಡಿತವಾಗುತ್ತಿತ್ತು. ಈಗ ಎಲ್‌ಪಿಜಿ ಮಾರುಕಟ್ಟೆ ದರದಲ್ಲಿ ದೊರೆಯುವ ಕಾರಣ ಅದರ ಮೇಲೆ ಜಿಎಸ್‌ಟಿ ಲೆಕ್ಕ ಹಾಕಬೇಕು ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ 18.11 ಕೋಟಿ ಸಬ್ಸಿಡಿ ಸಹಿತ ಎಲ್‌ಪಿಜಿ ಗ್ರಾಹಕರಿದ್ದಾರೆ. ಇವರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಕಳೆದೊಂದು ವರ್ಷದಿಂದ ಉಚಿತ ಗ್ಯಾಸ್ ಸಂಪರ್ಕ ಪಡೆದಿರುವ 3 ಕೋಟಿ ಬಡ ಮಹಿಳೆಯರೂ ಸೇರಿದ್ದಾರೆ. ಪ್ರಧಾನಿ ಕರೆಯ ಮೇರೆಗೆ ಸಬ್ಸಿಡಿ ತ್ಯಜಿಸಿದವರೂ ಸೇರಿ ಒಟ್ಟು 2.66 ಕೋಟಿ ಗ್ರಾಹಕರು ಸಬ್ಸಿಡಿ ರಹಿತ ಎಲ್‌ಪಿಜಿ ಬಳಸುತ್ತಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News