ಡಿಸೆಂಬರ್ 5 ರಿಂದ ಶಶಿಕಲಾ ಮೌನವೃತದಲ್ಲಿದ್ದಾರೆ: ದಿನಕರನ್

Update: 2017-12-28 16:37 GMT

ಬೆಂಗಳೂರು, ಡಿ.28: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರ ಪ್ರಥಮ ವಾರ್ಷಿಕ ಪುಣ್ಯತಿಥಿಯ ದಿನವಾದ ಡಿಸೆಂಬರ್ 5ರಿಂದ ಶಶಿಕಲಾ ಜೈಲಿನಲ್ಲಿ ಮೌನವೃತ ಆಚರಿಸುತ್ತಿದ್ದಾರೆ ಎಂದು ಎಐಎಡಿಂಕೆ ಶಶಿಕಲಾ ಬಣದ ಮುಖಂಡ ಟಿಟಿವಿ ದಿನಕರನ್ ತಿಳಿಸಿದ್ದಾರೆ.

 ‘ಅಮ್ಮ’ನ ಪುಣ್ಯತಿಥಿಯ ದಿನದಿಂದ ಶಶಿಕಲಾ ಮೌನವೃತ ಆಚರಿಸುತ್ತಿದ್ದಾರೆ. ಜನವರಿ ತಿಂಗಳಾಂತ್ಯದವರೆಗೆ ಮೌನವೃತ ಮುಂದುವರಿಯಲಿದೆ ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕಾರಾಗೃಹದಲ್ಲಿ ಬಂಧಿಯಾಗಿರುವ ಶಶಿಕಲಾರನ್ನು ಭೇಟಿಯಾದ ಬಳಿಕ ದಿನಕರನ್ ಸುದ್ದಿಗಾರರಿಗೆ ತಿಳಿಸಿದರು. 66.65 ಕೋಟಿ ರೂ. ಮೊತ್ತದ ಅಕ್ರಮ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿ ಶಶಿಕಲಾಗೆ 4 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ.

   ಡಿ.21ರಂದು ನಡೆದ ಆರ್‌ಕೆ ನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಶಶಿಕಲಾರನ್ನು ಪ್ರಥಮ ಬಾರಿಗೆ ಭೇಟಿಮಾಡಿದ ದಿನಕರನ್, ಪಕ್ಷದ ವಿಷಯದಲ್ಲಿ ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾನು ಶಶಿಕಲಾರಿಗೆ ಮಾಹಿತಿ ನೀಡಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಜಯಲಲಿತಾ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಆಯೋಗವು ಶಶಿಕಲಾಗೆ ಸಮನ್ಸ್ ಜಾರಿ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ದಿನಕರನ್, ವೈಯಕ್ತಿಕ ಹಾಜರಾತಿಯಿಂದ ಶಶಿಕಲಾಗೆ ವಿನಾಯಿತಿ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಬಳಿ ಇರುವ ಪುರಾವೆಗಳನ್ನು 15 ದಿನದೊಳಗೆ ಸಲ್ಲಿಸುವಂತೆ ತನಿಖಾ ಆಯೋಗ ತಿಳಿಸಿದೆ ಎಂದರು.

ತನಗೂ ತನಿಖಾ ಆಯೋಗದಿಂದ ಸಮನ್ಸ್ ಬಂದಿದೆ. ಅಗತ್ಯಬಿದ್ದರೆ ಆಯೋಗದೆದುರು ಹಾಜರಾಗಿ ವಿವರ ನೀಡುತ್ತೇನೆ ಎಂದವರು ಹೇಳಿದ್ದಾರೆ. ಐಎಎಸ್ ಅಧಿಕಾರಿಗಳು, ವೈದ್ಯರು, ಜಯಲಲಿತಾ ಸೋದರ ಸೊಸೆ ಜೆ.ದೀಪಾ, ಸೋದರಳಿಯ ದೀಪಕ್, ಡಿಎಂಕೆ ಕಾರ್ಯಕರ್ತ ಪಿ.ಸರವಣನ್ ಅವರು ಈಗಾಗಲೇ ತನಿಖಾ ಆಯೋಗದೆದುರು ಹಾಜರಾಗಿದ್ದಾರೆ.

ನಗರದ ನಿವಾಸಿ ಮಹಿಳೆಯೋರ್ವರು ತಾನು ಜಯಲಲಿತಾ ಪುತ್ರಿ ಎಂದು ಹೇಳಿಕೊಳ್ಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದಿವಂಗತ ಮುಖ್ಯಮಂತ್ರಿ ಎಂಜಿಆರ್ ನಿಧನದ ಸಂದರ್ಭವೂ ಇಂತಹ ಪ್ರಕರಣ ನಡೆದಿತ್ತು. ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಜಯಲಲಿತಾ ಹೇಳುತ್ತಿದ್ದರು. ತಾವೂ ಇದನ್ನೇ ಹೇಳುತ್ತಿದ್ದೇವೆ ಎಂದರು. ಜಯಲಲಿತಾ ಆಸ್ಪತ್ರೆಯಲ್ಲಿದ್ದ ವೀಡಿಯೊವನ್ನು ತನಗೆ ಅರಿವಿಲ್ಲದಂತೆ ತನ್ನ ಸಹಚರ ಪಿ.ವೆಟ್ರಿವೇಲ್ ಬಿಡುಗಡೆ ಮಾಡಿದ್ದಾರೆ ಎಂದು ದಿನಕರನ್ ಹೇಳಿದರು.

  ಜಯಲಲಿತಾರ ಒತ್ತಾಯದ ಮೇರೆಗೆ ಶಶಿಕಲಾ ಈ ವೀಡಿಯೊ ಚಿತ್ರೀಕರಿಸಿದ್ದರು . ನಮಗೆ ವೀಡಿಯೊ ಬಿಡುಗಡೆ ಮಾಡಬೇಕೆಂದಿದ್ದರೆ ಚುನಾವಣಾ ಆಯೋಗದ ಅನುಮತಿ ಪಡೆದು ಬಿಡುಗಡೆ ಮಾಡುತ್ತಿದ್ದೆವು ಎಂದ ದಿನಕರನ್, ತಮ್ಮನ್ನು ಆಯ್ಕೆ ಮಾಡಿದ ಆರ್.ಕೆ. ನಗರ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ‘ಅಮ್ಮನ ಉತ್ತರಾಧಿಕಾರಿಯಾಗಿರುವ ಚಿನ್ನಮ್ಮ(ಶಶಿಕಲಾ) ನೇತೃತ್ವದ ಎಐಎಡಿಂಕೆಯಲ್ಲಿ ಜನತೆ ವಿಶ್ವಾಸ ಇರಿಸಿದ್ದಾರೆ ಎಂಬುದಕ್ಕೆ ಈ ಗೆಲುವು ಸಾಕ್ಷಿ ಎಂದು ದಿನಕರನ್ ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News