ಜೆರುಸಲೇಮ್‌ಗೆ ರಾಯಭಾರ ಕಚೇರಿ ಸ್ಥಳಾಂತರ; ಅಮೆರಿಕಾದಿಂದ ಒತ್ತಡವಿಲ್ಲ ಎಂದ ಗ್ವಾಟೆಮಾಲಾ
ಗ್ವಾಟೆಮಾಲಾ ನಗರ, ಡಿ.28: ಗ್ವಾಟೆಮಾಲಾವು ಇಸ್ರೇಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಜೆರುಸಲೇಮ್‌ಗೆ ಸ್ಥಳಾಂತರಿಸುತ್ತಿದ್ದು, ಹಾಗೆ ಮಾಡಲು ಅಮೆರಿಕಾ ಯಾವುದೇ ರೀತಿಯ ಒತ್ತಡ ಹೇರಿಲ್ಲ ಎಂದು ಗ್ವಾಟೆಮಾಲಾದ ವಿದೇಶಾಂಗ ಸಚಿವೆ ಗುರುವಾರ ತಿಳಿಸಿದ್ದಾರೆ.
ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲು ಅಮೆರಿಕಾದಿಂದ ಒತ್ತಡ ಬಂದಿಲ್ಲ. ಇದು ನಮ್ಮ ಸರಕಾರದ ಆಂತರಿಕ ಮತ್ತು ವಿದೇಶಾಂಗ ನೀತಿಯನ್ನು ಗಮನದಲ್ಲಿಟ್ಟು ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಗ್ವಾಟೆಮಾಲಾದ ವಿದೇಶಾಂಗ ಸಚಿವೆ ಸಾಂಡ್ರಾ ಜೊವೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ರವಿವಾರದಂದು ಗ್ವಾಟೆಮಾಲಾದ ಅಧ್ಯಕ್ಷರಾದ ಜಿಮ್ಮಿ ಮೊರಾಲ್ ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ತಮ್ಮ ದೇಶದ ರಾಯಭಾರ ಕಚೇರಿಯನ್ನು ಜೆರುಸಲೇಮ್‌ಗೆ ಸ್ಥಳಾಂತರಿಸುವುದಾಗಿ ಘೋಷಿಸಿದ್ದರು. ಈ ಘೋಷಣೆಯೊಂದಿಗೆ ಗ್ವಾಟೆಮಾಲಾ, ಡೊನಾಲ್ಡ್ ಟ್ರಂಪ್ ಅವರ ಜೆರುಸಲೇಮ್‌ಅನ್ನು ಇಸ್ರೇಲ್‌ನ ರಾಜಧಾನಿಯಾಗಿ ಘೋಷಿಸಿ ತಮ್ಮ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವ ಹೇಳಿಕೆಯನ್ನು ಪುರಸ್ಕರಿಸಿ ಅದೇ ರೀತಿ ನಡೆದುಕೊಳ್ಳುತ್ತಿರುವ ಮೊದಲ ಮತ್ತು ಏಕಮಾತ್ರ ದೇಶವಾಗಿದೆ. ಆದರೆ ಅಮೆರಿಕಾದಂತೆ ಗ್ವಾಟೆಮಾಲಾ ತನ್ನ ರಾಯಭಾರ ಕಚೇರಿಯನ್ನು ಜೆರುಸಲೇಮ್‌ಗೆ ಯಾವಾಗ ಸ್ಥಳಾಂತರಿಸಲಿದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ.
ಆದರೆ ಗ್ವಾಟೆಮಾಲಾದ ಈ ಹೆಜ್ಜೆ ಜೆರುಸಲೇಮ್‌ನ ವಸ್ತುಸ್ಥಿತಿಯನ್ನು ಇಸ್ರೇಲ್ ಮತ್ತು ಫೆಲೆಸ್ತೀನ್ ಮಧ್ಯೆ ಶಾಂತಿ ಮಾತುಕತೆ ನಡೆಸುವ ಮೂಲಕ ಮಾತ್ರ ನಿರ್ಧರಿಸಬಹುದು ಎಂಬ ಅಂತಾರಾಷ್ಟ್ರೀಯ ಅಭಿಮತದ ಮುಖಕ್ಕೆ ಹೊಡೆದಂತಾಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಜೆರುಸಲೇಮ್‌ಅನ್ನು ಇಸ್ರೇಲ್ ರಾಜಧಾನಿಯಾಗಿ ಗುರುತಿಸಬೇಕೆಂಬ ಡೊನಾಲ್ಡ್ ಟ್ರಂಪ್ ಮನವಿಯನ್ನು ಕಳೆದ ವಾರ ಸಂಯುಕ್ತ ರಾಷ್ಟ್ರದ 128 ದೇಶಗಳು ತಿರಸ್ಕರಿಸಿದ್ದವು. ಕೇವಲ ಒಂಬತ್ತು ರಾಷ್ಟ್ರಗಳು ಅಮೆರಿಕ ಪರ ಮತ ಚಲಾಯಿಸಿದ್ದರೆ ಉಳಿದ ದೇಶಗಳು ಮತದಾನಕ್ಕೆ ಗೈರಾಗಿದ್ದವು. ಇದರಿಂದ ಟ್ರಂಪ್ ಹಾಗೂ ಅಮೆರಿಕಾ ತೀವ್ರ ಮುಖಭಂಗ ಅನುಭವಿಸಿತ್ತು.