ಮಹಾದಾಯಿ: ಮೂರು ರಾಜ್ಯಗಳು ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಲಿ- ಕುಮಾರಸ್ವಾಮಿ
ಮಂಗಳೂರು, ಡಿ. 28: ಮಹಾದಾಯಿ ನ್ಯಾಯಮಂಡಳಿ ತೀರ್ಪಿಗೆ ಒಳಪಟ್ಟು ಕರ್ನಾಟಕ 7.56 ಟಿಎಂಸಿ ನೀರು ಬಳಕೆ ಮಾಡಲು ಆದೇಶ ನೀಡಬೇಕು. ಇಲ್ಲವೇ ನೀರು ಬಿಡುಗಡೆ ಒಪ್ಪಿ ಮೂರೂ ರಾಜ್ಯಗಳು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಕ್ಕರ್ ಅವರು ಯಡಿಯೂರಪ್ಪರಿಗೆ ಪತ್ರ ಬರೆಯುವುದರಿಂದ ಸಮಸ್ಯೆಗೆ ಪರಿಹಾರ ದೊರೆಯದು. ಕಾವೇರಿ ವಿಷಯದಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ ಆದೇಶದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಮಧ್ಯಸ್ಥಿಕೆ ವಹಿಸಬೇಕು. ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಅವರು ಹೇಳಿದರು.
ಎರಡೂ ರಾಷ್ಟ್ರೀಯ ಪಕ್ಷಗಳ ರಾಜಕೀಯದಿಂದಾಗಿ ಬಡ ರೈತರು ಬೀದಿಗೆ ಇಳಿದು ಹೋರಾಟ ಮಾಡುವಂತಾಗಿದೆ ಎಂದ ಅವರು, ರಾಜ್ಯದಲ್ಲಿರುವ 17 ಮಂದಿ ಸಂಸದರು ಪ್ರಧಾನಿಯ ಮೇಲೆ ಒತ್ತಡ ಹೇರುವ ಮೂಲಕ ತಮ್ಮ ಧೈರ್ಯ ತೋರಿಸಲಿ ಎಂದು ಸವಾಲು ಹಾಕಿದರು.ಎತ್ತಿನಹೊಳೆ ಯೋಜನೆಯಿಂದ ಕೋಟ್ಯಾಂತರ ರೂ. ಕೊಳ್ಳೆ ಹೊಡೆಯಲಾಗುತ್ತಿದೆ. 12,000 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಇದುವರೆಗೆ 2,800 ಖರ್ಚು ಮಾಡಲಾಗಿದೆ. ಆದರೂ ಈ ಯೋಜನೆ ಇನ್ನೂ ಸಕಲೇಶಪುರವನ್ನೂ ತಲುಪಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಅವೈಜ್ಞಾನಿಕ ಯೋಜನೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದರು.