ಆಯುರ್ವೇದ್ ಪ್ರಾಕ್ಟೀಸ್‌ಗೆ ಪರವಾನಿಗೆಗಾಗಿ ಅರ್ಹತಾ ಪರೀಕ್ಷೆ: ಶೀಘ್ರವೇ ಮಸೂದೆ ಮಂಡನೆ
ಹೊಸದಿಲ್ಲಿ,ಡಿ.29: ಆಯರ್ವೇದ ಸೇರಿದಂತೆ ಭಾರತೀಯ ವೈದ್ಯಕೀಯ ವೃತ್ತಿಗಾಗಿ ಪರವಾನಿಗೆಯನ್ನು ಪಡೆಯಲು ಬಯಸುವ ವೈದ್ಯಕೀಯ ಪದವೀಧರರು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಶೀಘ್ರವೇ ಕಡ್ಡಾಯವಾಗಬಹುದು. ಇಂತಹುದೊಂದು ಪ್ರಸ್ತಾವನೆಯನ್ನು ಆರೋಗ್ಯ ಸಚಿವಾಲಯದ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಯ ಮಾದರಿಯಲ್ಲಿ ರೂಪಿಸಿರುವ ಕರಡು ಶಾಸನವು ಒಳಗೊಂಡಿದೆ.
ಕರಡು ಮಸೂದೆಯು ಹೋಮಿಯೊಪತಿ ಮತ್ತು ಭಾರತೀಯ ವೈದ್ಯ ಪದ್ಧತಿಗಳಲ್ಲಿ ಉನ್ನತ ಶಿಕ್ಷಣವನ್ನು ನಿಯಂತ್ರಿಸುತ್ತಿರುವ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೊಪತಿಗಳ ಬದಲಾಗಿ ನೂತನ ನಿಯಂತ್ರಣ ಪ್ರಾಧಿಕಾರವೊಂದನ್ನು ಸೃಷ್ಟಿಸಲು ಉದ್ದೇಶಿಸಿದೆ.
ನೀತಿ ಆಯೋಗದೊಂದಿಗೆ ಸಮಾಲೋಚನೆ ನಡೆಸಿರುವ ಆಯುಷ್ ಸಚಿವಾಲಯ ವು ಉದ್ದೇಶಿತ ಮಸೂದೆಯಲ್ಲಿ ಏಕೀಕೃತ ವೈದ್ಯಕೀಯವನ್ನು ಸೇರಿಸಲು ಯೋಜಿಸಿದೆ. ಇದರಿಂದ ಸಂಕ್ಷಿಪ್ತ ಕೋರ್ಸ್‌ವೊಂದನ್ನು ಮಾಡಿದ ಬಳಿಕ ಆಯುಷ್ ವೈದ್ಯರು ಆಧುನಿಕ ವೈದ್ಯವನ್ನು ಮತ್ತು ಆಧುನಿಕ ವೈದ್ಯರು ಆಯುರ್ವೇದವನ್ನು ಪ್ರಾಕ್ಟೀಸ್ ಮಾಡಲು ಸಾಧ್ಯವಾಗುತ್ತದೆ.
ನೀತಿ ಆಯೋಗದ ನೇತೃತ್ವದ ಸಮಿತಿಯು ರೂಪಿಸಿರುವ ರಾಷ್ಟ್ರೀಯ ಭಾರತೀಯ ವೈದ್ಯ ಪದ್ಧತಿಗಳು ಮತ್ತು ಹೋಮಿಯೊಪತಿ ಆಯೋಗ ಮಸೂದೆಯು ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಗುಣಮಟ್ಟದ ಬೋಧಕರ ನೇಮಕಕ್ಕಾಗಿ ಆಯುಷ್ ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲೂ ಶಿಫಾರಸು ಮಾಡಿದೆ. ಆಯುಷ್ ಸಂಸ್ಥೆಗಳಲ್ಲಿ ಎಲ್ಲ ಬೋಧಕರ ನೇಮಕಕ್ಕಾಗಿ ಈ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಅಲ್ಲದೆ ಮುಂಬರುವ ಶೈಕ್ಷಣಿಕ ವರ್ಷದಿಂದ ಆಯುಷ್ ಪದವಿ ತರಗತಿಗಳಿಗೆ ಸೇರಬಯಸುವವರು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವುದು ಕಡ್ಡಾಯವಾಗಲಿದೆ.
ಆದರೂ, ಪ್ರವೇಶ ಪರೀಕ್ಷೆಯನ್ನು ನೀಟ್‌ನೊಂದಿಗೆ ವಿಲೀನಗೊಳಿಸಬೇಕೇ ಅಥವಾ ನಮ್ಮದೇ ಆದ ಪ್ರವೇಶ ಪರೀಕ್ಷೆಯನ್ನು ಹೊಂದಿರಬೇಕೇ ಎನ್ನುವ ಬಗ್ಗೆ ಪರಿಶೀಲಿಸ ಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.
ಆಯುಷ್‌ನ ಎಲ್ಲ ವೈದ್ಯ ಪದ್ಧತಿಗಳ ಕೋರ್ಸ್‌ಗಳಿಗೆ ಸೇರಲು ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕಾಗುತ್ತದೆ.