×
Ad

ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2017-12-29 19:12 IST

ಹೊಸದಿಲ್ಲಿ, ಡಿ.29: ದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ದ ಸ್ಥಾನದಲ್ಲಿ ‘ನ್ಯಾಷನಲ್ ಮೆಡಿಕಲ್ ಕಮಿಷನ್’ ಎಂಬ ಹೊಸ ಸಂಸ್ಥೆಯನ್ನು ಆರಂಭಿಸುವ ಉದ್ದೇಶದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಪಾರದರ್ಶಕತೆಯನ್ನು ಖಾತರಿ ಪಡಿಸಿಕೊಳ್ಳಲು ಈ ಬದಲಾವಣೆ ಅಗತ್ಯ ಎಂದು ಮಸೂದೆಯನ್ನು ಮಂಡಿಸಿದ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದರು. ಆದರೆ ಮಸೂದೆ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಮಸೂದೆಯನ್ನು ಮೊದಲು ಸಂಸತ್‌ನ ಸ್ಥಾಯೀ ಸಮಿತಿಯ ಕೂಲಂಕುಷ ಪರಿಶೀಲನೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

 ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ಆಕ್ಷೇಪಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್, ಸಂಸತ್ತಿನ ಕಾರ್ಯವಿಧಾನವನ್ನು ಪಾಲಿಸುವಂತೆ ಸೂಚಿಸಿದರು ಹಾಗೂ ಮಸೂದೆ ಮಂಡನೆ ಕುರಿತು ಅಸಮಾಧಾನವಿದ್ದರೆ ಮೊದಲೇ ನೋಟಿಸ್ ನೀಡಬೇಕಿತ್ತು ಎಂದರು. ಸ್ಥಾಯಿ ಸಮಿತಿ ನೀಡಿದ ಸೂಚನೆಗಳನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಸಚಿವ ನಡ್ಡಾ ತಿಳಿಸಿದರು.

      ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಯ ನಿರ್ವಹಣೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವೌಲ್ಯಮಾಪನ ಹಾಗೂ ಮಾನ್ಯತೆ ನೀಡುವ ಪ್ರಕ್ರಿಯೆ ಮತ್ತು ವೈದ್ಯಕೀಯ ವೃತ್ತಿ ನಿರ್ವಹಿಸುವವರ ನೋಂದಣಿ ಪ್ರಕ್ರಿಯೆ ನಿರ್ವಹಿಸಲು ನಾಲ್ಕು ಸ್ವಾಯತ್ತ ಮಂಡಳಿಗಳನ್ನು (ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧೀನದಲ್ಲಿ) ರಚಿಸುವ ಬಗ್ಗೆ ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ಆಯೋಗವು ಸರಕಾರದಿಂದ ನಾಮನಿರ್ದೇಶಿತ ಅಧ್ಯಕ್ಷರು ಹಾಗೂ ಸದಸ್ಯರನ್ನು ಹೊಂದಿರುತ್ತದೆ. ಸಂಪುಟ ಕಾರ್ಯದರ್ಶಿ ಅಧೀನದ ಶೋಧನಾ ಸಮಿತಿ ಆಡಳಿತ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಆಯ್ಕೆ ಸಮಿತಿಯಲ್ಲಿ ಐವರು ಚುನಾಯಿತ ಸದಸ್ಯರು ಹಾಗೂ 12 ಮಾಜಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.

 ವೈದ್ಯಕೀಯ ಪದವಿ ಪಡೆದ ಅಭ್ಯರ್ಥಿಗಳು ವೃತ್ತಿ ಆರಂಭಿಸಲು ಅನುಮತಿ ಪತ್ರ ಪಡೆಯಬೇಕಿದ್ದರೆ ಸಾಮಾನ್ಯ ಪ್ರವೇಶ ಪರೀಕ್ಷೆ ತೇರ್ಗಡೆಯಾಗುವುದನ್ನು ಕಡ್ಡಾಯಗೊಳಿಸುವುದು ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಯು ಹೆಚ್ಚುವರಿ ವಿದ್ಯಾರ್ಥಿಗಳ ಸೇರ್ಪಡೆಗೆ ಅಥವಾ ಸ್ನಾತಕೋತ್ತರ ಶಿಕ್ಷಣ ಕ್ರಮವನ್ನು ಆರಂಭಿಸಲು ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮತ್ತು ಅನಾಚಾರ ಪದ್ಧತಿ ಹೆಚ್ಚಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News