ವಕ್ಫ್ ಆಸ್ತಿ ಉಳಿಸಲು ಹೋರಾಟ ಸಮಿತಿ ಬೇಕಿಲ್ಲ: ಯು.ಕೆ. ಮೋನು
ಮಂಗಳೂರು, ಡಿ.29: ವಕ್ಫ್ ಆಸ್ತಿಯನ್ನು ಮರಳಿ ಪಡೆಯಲು ಯಾವುದೇ ಹೋರಾಟ ಸಮಿತಿಯ ಅಗತ್ಯತೆ ಇಲ್ಲ. ವಕ್ಫ್ ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯ ಪಡೆಯನ್ನು ಸರಕಾರ ರಚಿಸಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಸ್ಪಷ್ಟಪಡಿಸಿದ್ದಾರೆ.
ಅವರು ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ವಕ್ಫ್ ಆಸ್ತಿಯನ್ನು ಉಳಿಸಲು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಇದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಇರುತ್ತಾರೆ. ವಕ್ಫ್ ಆಸ್ತಿಗಳು ಒತ್ತುವರಿಯಾದರೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಅಧಿಕಾರವು ವಕ್ಫ್ ಕಾರ್ಯಪಡೆಗೆ ಇರುತ್ತದೆ. ಯಾರಿಗೂ ವಕ್ಫ್ ಆಸ್ತಿ ರಕ್ಷಣೆಗೆ ಹೋರಾಟ ಸಮಿತಿ ರಚನೆ ಮಾಡಿ ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶ ಇರುವುದಿಲ್ಲ. ಒಂದು ವೇಳೆ ಯಾವುದೇ ಲೋಪ ದೋಷ ಮತ್ತು ಒತ್ತುವರಿಯಾದಲ್ಲಿ ಸರಕಾರ ಮತ್ತು ವಕ್ಫ್ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಜಿಲ್ಲೆಯ ಮಸೀದಿ, ಮದ್ರಸ ಹಾಗೂ ದರ್ಗಾ ಇವುಗಳನ್ನು ಮುಖ್ಯವಾಹಿನಿ ತರುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಆಯಾಯ ತಾಲೂಕುಗಳ ಕೇಂದ್ರ ಭಾಗದಲ್ಲಿ ನೇಮಿಸಲಾಗಿದೆ ಎಂದರು.
ಪ್ರತಿಯೊಂದು ಮಸೀದಿ ಮದ್ರಸ ಆಡಳಿತ ಸಮಿತಿಯು 2017ರಲ್ಲಿ ಜಾರಿಗೆ ಬಂದ ವಕ್ಫ್ ಕಾನೂನು ಪ್ರಕಾರ ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಾಮವಳಿಗೆ ಅಂಗೀಕಾರ ಪಡೆಯಬೇಕು. ಪ್ರತಿಯೊಂದು ವಕ್ಫ್ ಸಂಸ್ಥೆಗಳು ಆಡಳಿತ ಸಮಿತಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಅಂಗೀಕಾರ ಪಡೆಯಬೇಕು. ಪ್ರತಿ ವರ್ಷವೂ ಲೆಕ್ಕ ಪತ್ರವನ್ನು ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬೇಕು ಎಂದರು.
ಮಸೀದಿಯ ಅನುದಾನ ಮಂಜೂರಾತಿಗಾಗಿ ಜಿಲ್ಲೆಯಿಂದ ಹೋಗಿ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಬಾಕಿ ಇರುವ 59 ಮದ್ರಸ, ಮಸೀದಿಗಳ ದುರಸ್ತಿ, ಆವರಣ ಗೋಡೆ ನಿರ್ಮಾಣಕ್ಕೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಪ್ರಯತ್ನದ ಫಲವಾಗಿ 1,17,50,000 ರೂ. ಮಂಜೂರಾಗಿದೆ. ಉಳಿದ ಮೊತ್ತ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಜತೆಯಲ್ಲಿ ಸಮಾಲೋಚನೆ ಮಾಡಿ ಮಂಜೂರು ಮಾಡಲಾಗುವುದು ಎಂದು ಸಚಿವ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭ ವಕ್ಫ್ ಸಮಿತಿಯ ಸದಸ್ಯರಾದ ನಝೀರ್ ಮಠ, ಡಿ.ಎಂ.ಅಸ್ಲಂ, ಭಾಷಾ ತಂಙಳ್, ನೂರುದ್ದೀನ್ ಸಾಲ್ಮರ, ವಕ್ಫ್ ಅಧಿಕಾರಿ ಅಬೂಬಕರ್ ಉಪಸ್ಥಿತರಿದ್ದರು.
ಡಿ. 29ರಂದು ಮಸೀದಿಯ ಅನುದಾನ ಮಂಜೂರಾತಿಗಾಗಿ ಜಿಲ್ಲೆಯಿಂದ ಹೋಗಿ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಬಾಕಿ ಇರುವ 59 ಮದ್ರಸ, ಮಸೀದಿಗಳ ದುರಸ್ತಿ, ಆವರಣ ಗೋಡೆ ನಿರ್ಮಾಣಕ್ಕೆ 1,17,50 ರೂ. ಮಂಜೂರಾಗಿದೆ ಎಂದು ತಪ್ಪಾಗಿ ಪ್ರಕಟಿಸಲಾಗಿತ್ತು.