ಹಣ, ಖ್ಯಾತಿ, ಅಧಿಕಾರ ಇರುವವರ ಕಾಲಿಗೆ ಬೀಳಬೇಡಿ: ಅಭಿಮಾನಿಗಳಿಗೆ ರಜನಿಕಾಂತ್ ಕಿವಿಮಾತು
ಚೆನ್ನೈ, ಡಿ. 29: ಹಣ, ಪ್ರಸಿದ್ಧಿ ಮತ್ತು ಅಧಿಕಾರವಿರುವವರ ಕಾಲಿಗೆ ಬೀಳುವ ಪದ್ಧತಿಯ ವಿರುದ್ಧ ಮಾತನಾಡಿರುವ ತಮಿಳುಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ನಾವು ಕೇವಲ ದೇವರ ಮತ್ತು ಹೆತ್ತವರ ಕಾಲಿಗೆ ಮಾತ್ರ ಬೀಳಬೇಕು ಎಂದು ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ಅಭಿಮಾನಿಗಳ ಜೊತೆಗಿನ ಸಭೆಯ ಮೂರನೇ ದಿನವಾದ ಶುಕ್ರವಾರದಂದು ಮಾತನಾಡಿದ ರಜನಿ, ನಾವು ದೇವರ ಮುಂದೆ ಮತ್ತು ಜನ್ಮ ನೀಡಿದ ಹೆತ್ತವರ ಮುಂದೆ ಮಾತ್ರ ತಲೆಬಾಗಬೇಕು ಎಂದು ತಿಳಿಸಿದ್ದಾರೆ.
ನಮಗಿಂತ ಹಿರಿಯವರ ಕಾಲಿಗೂ ಬೀಳಬಹುದು ಯಾಕೆಂದರೆ ಅವರು ಜೀವನದಲ್ಲಿ ಹಲವು ಏರುಪೇರುಗಳನ್ನು ಕಂಡಿರುತ್ತಾರೆ ಮತ್ತು ಒಂದು ದಿನ ನೀವೂ ಜೀವನದಲ್ಲಿ ಅಂಥ ಸನ್ನಿವೇಶಗಳನ್ನು ಎದುರಿಸಲಿದ್ದೀರಿ ಎಂದು ಅಭಿಮಾನಿಗಳಿಂದ ತಲೈವಾ ಎಂದೇ ಕರೆಯಲ್ಪಡುವ ರಜನಿ ನುಡಿದರು. ಈ ರಾಘವೇಂದ್ರ ಮದುವೆ ಸಭಾಂಗಣದಲ್ಲಿ ನೆರೆದಿರುವ ನನ್ನ ಅಭಿಮಾನಿಗಳಿಗೆ ನಾನು ಮಾಂಸಾಹಾರ ಊಟ ನೀಡಲು ಬಯಸುತ್ತೇನೆ. ಆದರೆ ಇಲ್ಲಿ ಅದಕ್ಕೆ ಅನುಮತಿಯಿಲ್ಲ. ಹಾಗಾಗಿ ಇನ್ನೊಂದು ದಿನ ಮಾಂಸಾಹಾರ ಭೋಜನ ಸೇವಿಸುವ ಎಂದು 67ರ ಹರೆಯದ ರಜನಿ ಹೇಳಿದರು. ರಜನಿಕಾಂತ್ ಈ ರೀತಿ ಅಭಿಮಾನಿಗಳ ಜೊತೆಗಿನ ಸಭೆಯನ್ನು ಈ ವರ್ಷ ಎರಡನೇ ಬಾರಿ ಆಯೋಜಿಸುತ್ತಿದ್ದಾರೆ. ಈ ಹಿಂದೆ ಮೇ ತಿಂಗಳಲ್ಲಿ ತಮ್ಮ ಅಭಿಮಾನಿಗಳ ಸಭೆ ಆಯೋಜಿಸಿದ್ದ ರಜನಿ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು.
ತನ್ನ ರಾಜಕೀಯ ಪ್ರವೇಶದ ಬಗ್ಗೆ ನಿರ್ಧಾರವನ್ನು ಡಿಸೆಂಬರ್ 31ರಂದು ತಿಳಿಸುವುದಾಗಿ ರಜನಿ ಮೊದಲೇ ಹೇಳಿಕೊಂಡಿದ್ದು ಇದು ತಮಿಳುನಾಡಿನ ರಾಜಕೀಯರಂಗದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ.