ಮನುಷ್ಯನೆಂಬ ವಾಹನಕ್ಕೆ ಮನುಷ್ಯತ್ವದ ಅಗತ್ಯವಿದೆ -ಪುರಂದರ ಭಟ್
ಪುತ್ತೂರು, ಡಿ. 29: ಹೊಸತನ ಇಲ್ಲದ ಸಾಹಿತ್ಯ ಕ್ಷೇತ್ರ, ಸಂಘ ಸಂಸ್ಥೆಗಳು, ಶಿಕ್ಷಣ ಕ್ಷೇತ್ರ, ಉದ್ಯಮ ಕ್ಷೇತ್ರ, ಪತ್ರಿಕಾರಂಗ ಸೇರಿದಂತೆ ಯಾವುದೇ ರಂಗ ಬೆಳೆಯಲು ಸಾಧ್ಯವಿಲ್ಲ. ವಾಕ್ ಶುದ್ಧಿ, ಕರ್ಮ ಶುದ್ಧಿ ಹಾಗೂ ಚಿತ್ತ ಶುದ್ಧಿ ಮೂಲಕ ಮನುಷ್ಯನೆಂಬ ವಾಹನಕ್ಕೂ ‘ಮನುಷ್ಯತ್ವ’ ಎನ್ನುವ ಗುರುತು ಚೀಟಿಯ ಅತೀ ಅಗತ್ಯವಿದೆ ಎಂದು ಪುತ್ತೂರಿನ ಕರ್ನಾಟಕ ಸಂಘದ ಅಧ್ಯಕ್ಷ ಪುತ್ತೂರು ತಾಲ್ಲೂಕು ಪತ್ರಕರ್ತರ ಸಂಘದ ಕಾನೂನು ಸಲಹೆಗಾರ ವಕೀಲ ಬಿ. ಪುರಂದರ ಭಟ್ ಹೇಳಿದರು.
ಅವರು ಪುತ್ತೂರು ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪತ್ರಕರ್ತರ ವಾಹನಗಳಿಗೆ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪತ್ರಕರ್ತರ ವಾಹನಕ್ಕೆ ಗುರುತು ಚೀಟಿ ಬಿಡುಗಡೆ ಮಾಡುವ ಮೂಲಕ ಪುತ್ತೂರು ತಾಲ್ಲೂಕು ಪತ್ರಕರ್ತರ ಸಂಘ ಹೊಸತನಕ್ಕೆ ನಾಂದಿ ಹಾಡಿದೆ ಎಂದು ಹೇಳಿದರು.
ಸ್ಟಿಕ್ಕರ್ ಬಿಡುಗಡೆ ಮಾಡಿದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಸುರೇಶ್ ಶರ್ಮ ಮಾತನಾಡಿ, ಪತ್ರಕರ್ತ ಸಂಘದ ಲಾಂಛನ ಹೊಂದಿದ ಈ ಸ್ಟಿಕ್ಕರ್ ಪರಿಣಾಮಕಾರಿಯಾಗಲಿದೆ. ಪತ್ರಕರ್ತರನ್ನು ಗುರುತಿಸಲು ಇಲಾಖೆಗೂ ಸಹಾಯಕವಾಗಲಿದೆ. ಪತ್ರಕರ್ತರ ಸಂಘದ ಶ್ಲಾಘನೀಯ ವಿಚಾರವಾಗಿದ್ದು, ಇತರ ಭಾಗಗಳ ಪತ್ರಕರ್ತರಿಗೂ ಮಾದರಿ ಕಾರ್ಯಕ್ರಮ ಇದಾಗಿದೆ ಎಂದರು.
ಪುತ್ತೂರು ಇದೀಗ ಜನ ನಿಬಿಡ ಪ್ರದೇಶವಾಗಿದೆ. ಇಲ್ಲಿನ ರಸ್ತೆಗಳು ಕಿರಿದಾಗಿದ್ದು, ಪಾರ್ಕಿಂಗ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದೆ. ಇದಕ್ಕೆ ಪತ್ರಕರ್ತರು ಸೇರಿದಂತೆ ಎಲ್ಲರ ಸಹಾಯ ಸಹಕಾರ ಬೇಕಾಗಿದೆ. ಕಾನೂನು ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಹಿರಿಯ ಪತ್ರಿಕಾ ವಿತರಕ ಪುತ್ತೂರು ನಗರಸಭಾ ಸದಸ್ಯ ರಾಜೇಶ್ ಬನ್ನೂರು ಮಾತನಾಡಿ ನೈಜತೆಯತ್ತ ಹೆಚ್ಚು ಒತ್ತು ನೀಡಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ತೂರಿನ ಪತ್ರಕರ್ತರು ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಪತ್ರಕರ್ತರ ವಾಹನಗಳಿಗೆ ಸಂಘದ ಲಾಂಛನ ಹೊಂದಿದ ಗುರುತು ಚೀಟಿ ಬಿಡುಗಡೆ ಮಾಡುವ ಮೂಲಕ ಪ್ರೆಸ್ ಸ್ಟಿಕ್ಕರ್ ದುರ್ಬಳಕೆಯಾಗುವುದನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅವರು ಅಧ್ಯಕ್ಷೆ ವಹಿಸಿದ್ದರು. ಸಂಘದ ಸದಸ್ಯರಾದ ಸಂಶುದ್ದೀನ್ ಸಂಪ್ಯ ಸ್ವಾಗತಿಸಿದರು. ಮೇಘಾ ಪಾಲೆತ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಕಿರಣ್ ಕುಮಾರ್ ಕುಂಡಡ್ಕ ವಂದಿಸಿದರು. ಉಪಾಧ್ಯಕ್ಷ ಸುಧಾಕರ್ ತಿಂಗಳಾಡಿ ನಿರೂಪಿಸಿದರು.