×
Ad

ಆಲಂಪುರಿಯಲ್ಲಿ ಚಿಣ್ಣರ ಪಾರ್ಕ್: ಸಚಿವ ಬಿ.ರಮಾನಾಥ ರೈ

Update: 2017-12-29 20:45 IST

ಬಂಟ್ವಾಳ, ಡಿ. 29: ವಗ್ಗ ಸಮೀಪದ ಆಲಂಪುರಿಯಲ್ಲಿ ಗ್ರಾಮೀಣ ಬದುಕು, ಸಂಸ್ಕೃತಿ, ಪರಂಪರೆ ಮೇಳೈಸುವ ಚಿಣ್ಣರ ಪಾರ್ಕ್ ಅನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಅವರು ಬಂಟ್ವಾಳ ತಾಲೂಕು ಪಂಚಾಯತ್‌ನ 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 2ನೆ ಮಹಡಿಯ ತೆರೆದ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.

ಚಿಣ್ಣರ ಪಾರ್ಕ್‌ಗಾಗಿ 30ರಿಂದ 40 ಎಕರೆ ಸ್ಥಳವನ್ನು ಗುರುತಿಸಲು ಕಂದಾಯ ಇಲಾಖೆಗೆ ಸೂಚಿಸಲಾಗಿದ್ದು, ಅರಣ್ಯ ಇಲಾಖೆ ಇದನ್ನು ನಿರ್ವಹಿಸಲಿದೆ ಎಂದರು.

ತಾಪಂನ 1.17 ಎಕರೆ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು. ಇದು ವಾಣಿಜ್ಯ ಕಾಂಪ್ಲೆಕ್ಸ್ ಕೂಡ ಆಗಿರುವ ಕಾರಣ ತಾಪಂಗೆ ಹೆಚ್ಚಿನ ಆದಾಯವೂ ಲಭಿಸಲಿದೆ ಎಂದು ರೈ ಹೇಳಿದರು.

ಇದಕ್ಕೆ ಜಿಪಂನಿಂದ ಇರುವ ತಡೆಯನ್ನು ತೆರವುಗೊಳಿಸಲಾಗಿದ್ದು, ಬಹುಬೇಡಿಕೆಯ ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ರೈ ಹೇಳಿದರು.

ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮಾತನಾಡಿ, ರಕ್ತೇಶ್ವರಿ ದೇವಸ್ಥಾನದ ಬಳಿ ಇರುವ ಪುರಸಭಾ ಕಟ್ಟಡದ ಮಹಡಿ ನಿರ್ಮಾಣ ಕಾಮಗಾರಿಗೆ ಜನವರಿ ಮೊದಲ ವಾರದಲ್ಲಿ ಚಾಲನೆ ದೊರಕಲಿದೆ. 25 ಲಕ್ಷ ರೂ. ವೆಚ್ಚದ ಕಟ್ಟಡ ವಿಸ್ತರಣಾ ಕಾಮಗಾರಿ ಇದಾಗಲಿದೆ. ಇನ್ನಷ್ಟು ಪ್ರಗತಿ ಕಾರ್ಯಗಳಿಗೆ ಇದು ಪೂರಕವಾಗಲಿದೆ ಎಂದರು.

ಈ ಸಂದರ್ಭ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಪದ್ಮಶೇಖರ ಜೈನ್, ತಾಪಂ ಸದಸ್ಯರಾದ ಸಂಜೀವ ಪೂಜಾರಿ, ಎಂ.ಆರ್.ಹೈದರ್, ಮಲ್ಲಿಕಾ ಶೆಟ್ಟಿ, ಪ್ರಭಾಕರ ಪ್ರಭು, ಆದಂ, ತಹಶೀಲ್ದಾರ್ ಪುರಂದರ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.

ತಾಪಂ ಸಿಇಒ ಸಿಪ್ರಿಯಾನ್ ಮಿರಾಂದ ಸ್ವಾಗತಿಸಿ, ಎಇಇ ನರೇಂದ್ರಬಾಬು ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News