ಮಲ್ಪೆ: ಪ್ರವಾಸಕ್ಕೆ ಬಂದ ದಾವಣಗೆರೆಯ ವಿದ್ಯಾರ್ಥಿ ಸಮುದ್ರಪಾಲು
ಮಲ್ಪೆ, ಡಿ.29: ಶೈಕ್ಷಣಿಕ ಪ್ರವಾಸಕ್ಕೆ ಮಲ್ಪೆ ಬೀಚ್‌ಗೆ ಆಗಮಿಸಿದ್ದ ವಿದ್ಯಾರ್ಥಿ ಯೊಬ್ಬ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ 12:45ರ ಸುಮಾರಿಗೆ ನಡೆದಿದೆ.
ಮೃತರನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಾಲಿವಾನ ಸರಕಾರಿ ಪ್ರೌಢ ಶಾಲೆಯ 9ನೆ ತರಗತಿಯ ವಿದ್ಯಾರ್ಥಿ ಮಂಜುನಾಥ್(14) ಎಂದು ಗುರುತಿಸಲಾಗಿದೆ.
ಈ ಶಾಲೆಯ 54 ಮಂದಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಸ್ ನಲ್ಲಿ ಶೈಕ್ಷಣಿಕ ಪ್ರವಾಸ ಹೊರಟಿದ್ದು, ಇಂದು ಮಧ್ಯಾಹ್ನ 12.45ರ ಸುಮಾರಿಗೆ ಇವರು ಮಲ್ಪೆ ಬೀಚ್ ತಲುಪಿದ್ದರೆನ್ನಲಾಗಿದೆ.
ಅಲ್ಲಿ ವಿದ್ಯಾರ್ಥಿಗಳು ಸಮುದ್ರದ ನೀರಿಗೆ ಇಳಿದು ಆಟ ಆಡುತ್ತಿದ್ದಾಗ ಅವರಲ್ಲಿ ಮಂಜುನಾಥ್ ಅಲೆಗೆ ಸಿಲುಕಿ ನೀರು ಪಾಲಾದನು. ಸ್ಥಳೀಯರು ಹುಡುಕಾಟ ನಡೆಸಿದರೂ ಆತ ಪತ್ತೆಯಾಗಲಿಲ್ಲ. ಮಧ್ಯಾಹ್ನ 1.30ರ ಸುಮಾರಿಗೆ ಮಂಜುನಾಥನ ಮೃತದೇಹ ಅದೇ ಸ್ಥಳದಲ್ಲಿ ಪತ್ತೆಯಾಯಿತು. ಮೃತದೇಹವನ್ನು ಅಜ್ಜರಕಾಡು ಶವಗಾರದಲ್ಲಿ ಇರಿಸಲಾಗಿದ್ದು, ಮೃತರ ಮನೆಯವರು ಉಡುಪಿಗೆ ಆಗಮಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಮಲ್ಪೆ ಬೀಚ್‌ಗೆ ಶೈಕ್ಷಣಿಕ ಪ್ರವಾಸ ಕ್ಕೆಂದು ಬರುತ್ತಿದ್ದು, ಅವರನ್ನು ಕರೆ ತರುವ ಶಿಕ್ಷಕರು ಮಕ್ಕಳು ನೀರಿಗೆ ಇಳಿಯ ದಂತೆ ಜಾಗೃತೆ ವಹಿಸಬೇಕು. ಸಮುದ್ರ ಅಲೆಗಳು ಅಪಾಯಕಾರಿಯಾಗಿರುವುದರಿಂದ ಪ್ರವಾಸಿಗರು ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಮಲ್ಪೆ ಪೊಲೀಸ್ ಉಪನಿರೀಕ್ಷಕ ಮಧು ಮನವಿ ಮಾಡಿದ್ದಾರೆ.