ಮಂಗಳೂರು: ಬಿಸಿಯೂಟ ನೌಕರರ ಬಾಕಿ ವೇತನ ನೀಡಲು ಒತ್ತಾಯಿಸಿ ಮನವಿ
ಮಂಗಳೂರು, ಡಿ. 29: ಬಿಸಿಯೂಟ ನೌಕರರಿಗೆ ನೀಡಬೇಕಾದ ಮಾಸಿಕ ವೇತನವನ್ನು ಕಳೆದ ಮೂರು ತಿಂಗಳಿನಿಂದ ನೀಡದಿರುವುದನ್ನು ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಜಿಲ್ಲಾ ಅಧಕ್ಷರಾದ ಪದ್ಮಾವತಿ ಶೆಟ್ಟಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯವರಿಗೆ ಈ ಬಗ್ಗೆ ಮನವಿಯನ್ನು ನೀಡಿ ಕೂಡಲೇ ಬಿಸಿಯೂಟ ನೌಕರರಿಗೆ ಬಾಕಿ ಇರುವ ಮಾಸಿಕ ವೇತನವನ್ನು ನೀಡಬೇಕೆಂದು ಒತ್ತಾಯಿಸಲಾಗಿದೆ.
ಅಕ್ಷರದಾಸೋಹ ನೌಕರರು ಶಾಲಾ ಸಮಯದಲ್ಲಿ ದಿನಪೂರ್ತಿ ಬಿಸಿಯೂಟದ ಸಂಬಂಧಿಸಿದ ಕೆಲಸವನ್ನು ನಿರ್ವಸುತ್ತಿರುವುದರಿಂದ ಅವರಿಗೆ ಬೇರೆ ಉದ್ಯೋಗ ಇರುವುದಿಲ್ಲ. ಕುಟುಂಬದ ನಿರ್ವಹಣೆಗೆ ಅವರ ಕುಟುಂಬದ ಇತರ ಸದಸ್ಯರೊಂದಿಗೆ ಇವರಿಗೆ ಸಿಗುವ ವೇತನವು ಪ್ರಯೋಜನಕ್ಕೆ ಬೀಳುತ್ತಿದೆ. 2017ರ ಅಕ್ಟೋಬರ್ ತಿಂಗಳಿನಿಂದ ಅವರಿಗೆ ನೀಡಬೇಕಾದ ಮಾಸಿಕ ವೇತನವನ್ನು ನೀಡದಿರುವುದರಿಂದ ಬಿಸಿಯೂಟ ನೌಕರರು ಕಂಗಾಲಾಗಿದ್ದಾರೆ. ಈ ವೇತನವು ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುತ್ತಿತ್ತು. ಈ ಜುಜುಬಿ ವೇತನವನ್ನು ಕೂಡಾ ನೀಡದೆ ಅವರನ್ನು ದುಡಿಸುತ್ತಿರುವುದು ಯಾವ ನ್ಯಾಯ. ಜಿಲ್ಲಾ ಪಂಚಾಯತಿಯ ಕಾರ್ಮಿಕ ವಿರೋಧಿ ನೀತಿಯನ್ನು ಬಿಸಿಯೂಟ ನೌಕರರ ಸಂಘ ಖಂಡಿಸುತ್ತದೆ. ಕಳೆದ ಬಾರಿ ಕೂಡಾ ಇದೇ ರೀತಿ ಮೂರು ನಾಲ್ಕು ತಿಂಗಳ ನಂತರ ವೇತನ ನೀಡಿ ಅವರನ್ನು ಸತಾಯಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ರೀತಿ ವೇತನ ನೀಡದೆ ದುಡಿಸುತ್ತಿರುವುದು ಶೋಷಣೆಯಾಗಿದೆ. ಕೂಡಲೇ ಬಿಸಿಯೂಟ ನೌಕರರಿಗೆ ನ್ಯಾಯೋಚಿತವಾಗಿ ನೀಡ ಬೇಕಾದಂತಹ ವೇತನವನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಇಲ್ಲದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಹೇಳಿಕೆಯಲ್ಲಿ ಎಚ್ಚರಿಸಲಾಗಿದೆ.
ನಿಯೋಗದಲ್ಲಿ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಖಜಾಂಚಿ ಭವ್ಯಾ, ಸಿಐಟಿಯು ಜಿಲ್ಲಾ ಮುಂದಾಳು ವಸಂತ ಆಚಾರಿ ಉಪಸ್ಥಿತರಿದ್ದರು.